ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಸ್ನಾತಕೋತ್ತರ ಅತಿಥಿ ಉಪನ್ಯಾಸಕರ ಸಂಘದಿಂದ ಕಲಬುರಗಿ ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕಾರ್ಯ ಸೌಧದ ಎದುರು ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಅರುಣ ಕುಮಾರ್ ಕುರನೆ ಮಾತನಾಡಿ, “ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದ ಸ್ನಾತಕೋತ್ತರ ಅತಿಥಿ ಉಪನ್ಯಾಸಕರು ಮತ್ತು ಯುಜಿಸಿ ನಿಯಮಾವಳಿ ಪ್ರಕಾರ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಯುಜಿಸಿ ನಿಯಮಾವಳಿ ಪ್ರಕಾರ ₹50,000 ವೇತನ ನೀಡಬೇಕು. ಬದಲಾಗಿ ಕೇವಲ ₹36,000 ನೀಡಿ ಈವರೆಗೂ ಅನ್ಯಾಯ ಮಾಡುತ್ತ ಬಂದಿದ್ದಾರೆ. ಈಗಲಾದರು ₹50,000 ವೇತನ ನೀಡಿ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
“ವಿದ್ಯಾರ್ಥಿಗಳಿಂದ 4,500 ಪ್ರವೇಶ ಶುಲ್ಕ ಪಡೆದು ಆತಿಥಿ ಉಪನ್ಯಾಸಕರಿಗೆ ತಿಂಗಳಿಗೆ ₹36,000 ವೇತನ ನೀಡುತ್ತಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳಿಂದ ₹13,000 ಪ್ರವೇಶ ಶುಲ್ಕವೆಂದರೆ ಎರಡು ಪಟ್ಟು ಹೆಚ್ಚಿಗೆ ಶುಲ್ಕ ಪಡೆದು ಕೇವಲ ₹36,000 ವೇತನ ನೀಡುವುದು ಅನ್ಯಾಯ. ಹಾಗಾಗಿ ಪ್ರತಿ ತಿಂಗಳಿಗೆ ₹50,000ದಂತೆ 12 ತಿಂಗಳ ವೇತನ ನೀಡಬೇಕು” ಎಂದು ಆಗ್ರಹಿಸಿದರು.
“ಸಮಸ್ಯೆಗೆ ಪರಿಹಾರ ಸಿಗುವವರೆಗೆ ಉಪವಾಸ ಸತ್ಯಾಗ್ರಹ, ತೀವ್ರ ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗಿದೆ. ಬೇಡಿಕೆ ಈಡೇರದಿದ್ದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ಮಾಡಬೇಕಾಗುತ್ತದೆ. ನಮಗಾದ ಅನ್ಯಾಯವನ್ನು ಮಾಧ್ಯಮದ ಮೂಲಕ ಸರ್ಕಾರಕ್ಕೆ ತಿಳಿಸಬೇಕಾಗುತ್ತದೆ. ಹಾಗಾಗಬಾರದು ಎಂದಾದಲ್ಲಿ ಆದಷ್ಟು ಬೇಗ ವೇತನ ಹೆಚ್ಚಿಸಿ ನ್ಯಾಯ ಒದಗಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಸಂಡೂರಿನ ಬೆಟ್ಟದಲ್ಲಿ ನಿಧಿ ಶೋಧ; ಐವರ ಬಂಧನ
ಡಾ. ಎಂ ಬಿ ಕಟ್ಟಿ, ಹಣಮಂತ, ಶಾಂತಕುಮಾರ ಛಿದ್ರಿ, ಮಾಧುರಿ, ಶಿವಾನಂದ, ಭೀಮಷ ಸಾಗರ್, ರಹೇಮಾನ್ ಪಟೇಲ್, ಶಂಭುನಾಥ್ ನಡಗೇರಿ, ಶಾಮ್ ನಟೇಕರ್, ಸುಲಬಾಯಿ, ಅಶೋಕ್ ದೊಡ್ಡಮನಿ, ಅನಿಲ್ ಟೆಂಗಳಿ, ರಾಜುಕುಮಾರ್ ದನ್ನೂರ್ ಸೇರಿದಂತೆ ಇತರರು ಇದ್ದರು.