ಜನ ವಿರೋಧಿ, ರೈತ ವಿರೋಧಿಯಾಗಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ. ಸಂಘಟನೆಯ ಮುಖಂಡರು ಕಬ್ಬು ಮತ್ತು ಅಭಿವೃದ್ಧಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಕಲಬುರಗಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಸಂಘಟನೆಯ ಮುಖಂಡರು, “ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆದರೂ, ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ. ತನ್ನ ಮೊಂಡುತನದಿಂದ ಕಾಯ್ದೆಯನ್ನು ಹಿಂಪಡೆಯದೆ, ರೈತರನ್ನು ಶೋಷಣೆ ಮಾಡಲು ಖಾಸಗಿ ಬಂಡವಾಳಿಗರಿಗೆ ದಾರಿ ಮಾಡಿದೆ. ಆ ಕಾಯ್ದೆಯನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
“ಕೃಷಿ ಮಾರುಕಟ್ಟೆಯು ರಾಜ್ಯದ ಪಟ್ಟಿಯಲ್ಲಿ ಬರುವ ವಿಷಯವಾಗಿದೆ. ಹೀಗಾಗಿ, ಎಪಿಎಂಸಿ ಸಂಬಂಧ ನೇರವಾಗಿ ಕಾಯಿದೆ ಅಂಗೀಕರಿಸಲು ಸಾಧ್ಯವಿಲ್ಲದ ಕೇಂದ್ರ ಸರ್ಕಾರವು ಮಾದರಿ ಕೃಷಿ ಉತ್ಪನ್ನ ಹಾಗೂ ಜಾನುವಾರು ಮಾರುಕಟ್ಟೆ ಕಾಯಿದೆ-2017ಅನ್ನು ರಚಿಸಿತ್ತು. ಎಲ್ಲ ರಾಜ್ಯಗಳಿಗೆ ಈ ಮಾದರಿಯಲ್ಲಿ ತಮ್ಮ ಎಪಿಎಂಸಿ ಕಾಯ್ದೆಗಳನ್ನು ತಿದ್ದುಪಡಿ ಮಾಡುವಂತೆ ಸೂಚಿಸಿತ್ತು. ಈ ಸೂಚನೆ ಪಾಲಿಸದಿದ್ದರೆ ಅನುದಾನ ನೀಡುವುದಿಲ್ಲ ಎಂಬ ಬೆದರಿಕೆಯನ್ನು ಸಹ ಹಾಕಿತ್ತು. ಈ ಹಿಂದೆ, ಇದೇ ಸ್ವರೂಪದ ಮಾದರಿ ಮಾರುಕಟ್ಟೆ ಕಾಯ್ದೆ-2003ಅನ್ನು ರಾಜ್ಯ ಸರ್ಕಾರ ಅಂಗೀಕರಿಸಲು ಯತ್ನಿಸಿತ್ತು. ಆದರೆ, ರೈತ ಹೋರಾಟದಿಂದ ಕಾಯ್ದೆ ಜಾರಿಯಾಗಲಿಲ್ಲ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ಕಾಯ್ದೆಯಿಂದಾಗಿ ಎಪಿಎಂಸಿ ಮಾರುಕಟ್ಟೆಗಳು ಶಾಶ್ವತವಾಗಿ ಮುಚ್ಚಿಹೋಗುತ್ತದೆ. ಹಮಾಲರು ಚಿಲ್ಲರೆ ವ್ಯಾಪಾರಿಗಳು ದಿವಾಳಿಯಾಗಿ, ರೈತರು ಅದರಲ್ಲೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ತಮ್ಮ ಉತ್ಪನ್ನಗಳಿಗೆ ಖರೀದಿದಾರರೇ ಇಲ್ಲದೇ ಕೃಷಿ ಸಹವಾಸವೇ ಬೇಡ ಎಂದು ಕೃಷಿಯಿಂದ ಹೊರಗುಳಿಯುವ ಆತಂಖವಿದೆ. ಸರ್ಕಾರಿ ಖರೀದಿ ವ್ಯವಸ್ಥೆ ಇಲ್ಲದೇ ಅಂತಿಮವಾಗಿ ಆಹಾರ ಭದ್ರತೆಗೆ ದೊಡ್ಡ ಆಪತ್ತಿಗೆ ಎಡೆ ಮಾಡಿಕೊಡಲಿದೆ” ಎಂದು ಎಚ್ಚರಿಕೆ ನೀಡಿದದಾರೆ.
ಈ ಸುದ್ದಿ ಓದಿದ್ದೀರಾ?: ಕೋಮು ದ್ವೇಷದ ಹೇಳಿಕೆ: ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ದೂರು
“ಎಪಿಎಂಸಿ ಅಂದರೆ ಮಾರುಕಟ್ಟೆಯಲ್ಲಿ ರೈತರು ತಮ್ಮ ಕೃಷಿ ಉತ್ಪನ್ನಗಳ ಮಾರಾಟದ ಸಂದರ್ಭದಲ್ಲಿ ಶೋಷಣೆಗೆ ಒಳಗಾಗದಂತೆ ನಿಯಂತ್ರಣ ಹಾಗೂ ನಿಗಾವಹಿಸುವ ವ್ಯವಸ್ಥೆ. ಲೈಸೆನ್ಸ್ ಟು ಪ್ರೊಕ್ಯರ್, ಲೈಸೆನ್ಸ್ ಟು ಪರ್ಚೇಸ್, ಲೈಸೆನ್ಸ್ ಟು ಟ್ರಾನ್ಸರ್ ಅಂದರೆ ಖರೀದಿ, ಸಂಗ್ರಹಣೆ, ಸಾಗಾಣಿಕೆಗೆ ಲೈಸೆನ್ಸ್ ಅನ್ನು ಎಪಿಎಂಸಿ ಮೂಲಕ ಪಡೆದ ನೋಂದಾಯಿತರಿಗೆ ಮಾತ್ರ ವ್ಯವಹಾರ ಮಾಡಲು ಅವಕಾಶ ನೀಡಿ, ಪ್ರಾಂಗಣದ ಒಳಗೆ ಸ್ಪರ್ಧಾತ್ಮಕ ದರ ಪಡೆಯುವಂತೆ ಅವಕಾಶ ಕಲ್ಪಿಸುವುದು. ಮಾರಾಟ ಮಾಡಿದ ನಂತರ ಹಣ ಪಡೆಯುವ ಖಾತರಿಯನ್ನೂ ಎಪಿಎಂಸಿ ಕಲ್ಪಿಸುತ್ತದೆ” ಎಂದು ವಿವರಿಸಿದ್ದಾರೆ.
“ತಿದ್ದುಪಡಿ ಕಾಯ್ದೆಯಿಂದ ಎಂಪಿಎಂಸಿಗಳು ಮುಚ್ಚುವ ಸಾಧ್ಯತೆಗಳಿವೆ. ಎಪಿಎಂಸಿಯ ಲಕ್ಷಾಂತರ ಕಾರ್ಮಿಕರು ಬೀದಿಪಾಲಾಗುತ್ತಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಹಲವಾರು ಖಾಸಗಿ ವ್ಯಾಪಾರಿಗಳು ತೊಗರಿ ಬೇಳೆಯನ್ನು ನೇರವಾಗಿ ರೈತರಿಂದ ಖರೀದಿಸಿ ಅದನ್ನು ‘ಸಂಗ್ರಹಿಸಲು’ ಪ್ರಾರಂಭಿಸಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಸಿಗದೆ, ಬೆಲೆ ಏರಿಕೆಯಾಗುತ್ತದೆ. ಗ್ರಾಮಕರ ಮೇಲೂ ನೇರ ಪರಿಣಾಮ ಬೀರುತ್ತದೆ” ಎಂದು ತಿಳಿಸಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ ಸೇರಿದಂತೆ ಹಲವರು ಇದ್ದರು.