ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆದು, ಅಶಾಂತಿ ಕೊನೆಗಾಣಿಸಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ಕಾರ್ಯಕರ್ತರು ಕಲಬುಗರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಕಾರ್ಯಕರ್ತರು, “ಎರಡು ತಿಂಗಳುಗಳಿಂದ ಅಶಾಂತಿಯಲ್ಲಿ ಮುಳುಗಿರುವ ಮಣಿಪುರದ ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದೆ. ಮಹಿಳೆಯರ ಮೇಲಿನ ದೌಜನ್ಯವು ಆತಂಕ ಮತ್ತು ನೋವುಂಟು ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಸಂಚಾಲಕಿ ಸುಜಾತ, “ಮಣಿಪುರದ ಜನರು ಪದೇ ಪದೇ ದೂರುಗಳು ಮತ್ತು ಕುಂದುಕೊರತೆಗಳನ್ನು ವ್ಯಕ್ತಪಡಿಸುತ್ತಿದ್ದರೂ ಪ್ರಧಾನಿಗಳು ಮೌನವಾಗಿದ್ದಾರೆ. ಅವರ ಮೌನ ದೇಶಕ್ಕೆ ನಿರಾಶಾದಾಯಕವಾಗಿದೆ” ಎಂದರು.
“ಮಣಿಪುರದ ಘಟನೆಯನ್ನು ತುರ್ತುಪರಿಸ್ಥಿತಿಯೆಂದು ಪರಿಗಣಿಸಿ, ಅಲ್ಲಿನ ಅಶಾಂತಿಯನ್ನು ಪರಿಹರಿಸಲು ತಕ್ಷಣದ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹುಲಗಮ್ಮ, ಲಕ್ಷ್ಮಿ, ಶಿವಕುಮಾರ್ ಸೇರಿದಂತೆ ಹಲವರು ಇದ್ದರು.