ಜೇವರ್ಗಿ ಪುರಸಭೆಯಲ್ಲಿ ಸುಮಾರು ಏಳು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಏಕಾಏಕಿ ಕೆಲಸದಿಂದ ಕೈಬಿಟ್ಟಿದ್ದನ್ನು ಖಂಡಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದಿಂದ ಜಂಟಿಯಾಗಿ ಕಲಬುರಗಿ ಮಿನಿ ವಿಧಾನಸಭೆ ಎದುರುಗಡೆ ಧರಣಿ ನಡೆಸುತ್ತಿದೆ.
ʼಕೆಲಸದಿಂದ ಕೈಬಿಟ್ಟ ನೌಕರರನ್ನು ಪುನಃ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಮುಂಬಡ್ತಿಯಲ್ಲಿ ಸೇವಾ ಹಿರಿತನ ಮತ್ತು ಅನುಭವ ಪರಿಗಣಿಸದೆ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ನೌಕರರನ್ನು ಕೆಲಸದಿಂದ ತೆಗೆದಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕುʼ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ದಸಂಸ ತಾಲ್ಲೂಕು ಸಂಚಾಲಕ ಸಿದ್ರಾಮ ಕಟ್ಟಿ ಮಾತನಾಡಿ, ʼಜೇವರ್ಗಿ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಜನ ನೌಕರರನ್ನು ಎರಡ್ಮೂರು ವರ್ಷಗಳಿಂದ ಸೇವಾ ಭದ್ರತೆ ಸೇರಿದಂತೆ ಇತರೆ ಸೌಲಭ್ಯ ಒದಗಿಸದೆ ದುಡಿಸಿಕೊಳ್ಳುತ್ತಿರುವ ಅಧಿಕಾರಿ ಶ್ರೀನಿವಾಸ ಸೂರ್ಯನ್ ಹಾಗೂ ಖಾಯಂ ಮತ್ತು ಹೊರಗುತ್ತಿಗೆ ನೌಕರರ ಸೇವಾ ಅವಧಿಯ ಮಾಹಿತಿಯನ್ನು ಸರಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿರುವ ಅಧಿಕಾರಿ ಪೀರಶೆಟ್ಟಿ ಅವರನ್ನು ತಕ್ಷಣ ಅಮಾನತ್ತುಗೊಳಿಸಬೇಕುʼ ಎಂದು ಒತ್ತಾಯಿಸಿದರು.
ʼ10 ಜನ ನೀರು ನಿರ್ವಾಹಕರ ಬಾಕಿ ವೇತನ ತಕ್ಷಣ ಪಾವತಿಸುವುದು ಹಾಗೂ ಎರಡು ವರ್ಷದಿಂದ ನೀರು ನಿರ್ವಾಹಕರಾಗಿ ಕೆಲಸ ಮಾಡಿರುವ ಶ್ರವಣಕುಮಾರ, ಬಲರಾಮ ಎಂಬ ಇಬ್ಬರ ಬಾಕಿ ವೇತನ ತಕ್ಷಣ ಪಾವತಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಹೊಟ್ಟೆ ನೋವು; ಕುರಿ ಹೇನಿನ ಔಷಧಿ ಕುಡಿದು ಮಹಿಳೆ ಸಾವು
ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಶಿವಕುಮಾರ ಹೆಗಡೆ, ಸಂಗಣ್ಣ ಹೊಸಮನಿ, ಮಹೇಶ ಕ್ಷತ್ರಿ, ಶ್ರೀಹರಿ ಕರಕಳ್ಳಿ, ಸಿದ್ದು ಕೆರೂರ, ಶರಣಬಸಪ್ಪ ಲಖಣಾಪೂರ, ಜೈಭೀಮ್ ನರಿಬೋಳ ಸೇರಿದಂತೆ ಮತ್ತಿತರರಿದ್ದರು.
