ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ ಮಾತನಾಡಿ, ʼಜಿಲ್ಲೆಯಲ್ಲಿ ಸುಮಾರು 80 ವರ್ಷಗಳಿಂದ ಭೂಹೀನ ಮತ್ತು ಬಡ ರೈತರು ಕಂದಾಯ ಹಾಗೂ ಅರಣ್ಯದ ಕುರುಚಲು ಗಿಡ, ಕಲ್ಲು ಭೂಮಿ ಇರುವ ಪ್ರದೇಶಗಳಲ್ಲಿ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿದ್ದಾರೆ. ಇದು ಬಹುಪಾಲು ರೈತರ ಬದುಕಿಗೆ ಜೀವನಾಧಾರವಾಗಿದೆ. ಎಲ್ಲಾ ಸರ್ಕಾರಗಳು ಬಡ ರೈತರ ಜೀವನದ ವಸ್ತುಸ್ಥಿತಿ ಅರಿವಿದ್ದೇ ಸರ್ಕಾರಕ್ಕೆ ಸೇರಿದೆ ಜಮೀನಿನಲ್ಲಿ ಉಳುಮೆಗೆ ಅವಕಾಶ ಕೊಡುತ್ತಾ ಬಂದಿದೆ. ಆದರೆ ಶಾಸನಬದ್ದವಾಗಿ ಭೂಮಿಯ ಹಕ್ಕು ದೊರೆಯದೆ ಇರುವುದರಿಂದ ಬಗರ್ ಹುಕುಂ ಸಾಗುವಳಿದಾರರಿಗೆ ದಿಕ್ಕು ತೋಚದಂತಾಗಿದೆ. ಸರ್ಕಾರ ಕೂಡಲೇ ರೈತರಿಗೆ ನ್ಯಾಯ ಒದಗಿಸಿಕೊಡಬೇಕುʼ ಎಂದು ಆಗ್ರಹಿಸಿದರು.
ʼಸಹಜವಾಗಿ ಇವರಿಗೆ ಕೃಷಿ ಬೆಳೆ ಸಾಲ, ಕೃಷಿ ಪರಿಕರ ಮೇಲಿನ ಸಾಲ ಹಾಗೂ ಇನ್ನಿತರ ಜೀವನೋಪಾಯಕ್ಕಾಗಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಅಲ್ಪಾವಧಿ ಸಾಲ ದೊರೆಯದ ಕಾರಣ ಬಹುತೇಕ ಬಡ ರೈತರು ಬೇರೆ ದಾರಿಯಿಲ್ಲದೆ ಕೈಸಾಲ ಪಡೆದು ಸಂಕಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿ ಅವರನ್ನು ಆತ್ಮಹತ್ಯೆಗೆ ದೂಡುವಂತೆ ಮಾಡುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಸರ್ಕಾರ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುವುದೆಂದರೆ ದೊಡ್ಡ ಕರುಣೆ ಅಥವಾ ಭಿಕ್ಷೆಯಲ್ಲ, ಅದು ನ್ಯಾಯಬದ್ದವಾಗಿ ಕೊಡಬೇಕಾಗಿರುವ ಹಕ್ಕುʼ ಎಂದರು.
‘ಜಿಲ್ಲೆಯಲ್ಲಿ ಬಾಕಿ ಇರುವ ಪ್ರಕರಣ ಇತ್ಯರ್ಥ ಮಾಡಲು ಎಲ್ಲಾ ತಾಲೂಕಗಳಲ್ಲಿ ಭೂ ಮಂಜೂರಾತಿ ಸಮಿತಿ ರಚನೆ ಮಾಡಬೇಕು. ಈಗಾಗಲೇ ಅರಣ್ಯದ ಅಂಚಿನಲ್ಲಿ ಸಾಗುವಳಿ ಮಾಡುತ್ತಿರುವ ಭೂಮಿ ಸಿ ಮತ್ತು ಡಿ ಗುಂಪಿಗೆ ಸೇರಿದೆ. ಅದನ್ನು ಕಂದಾಯ ಭೂಮಿಯನ್ನಾಗಿ ಪರಿರ್ವತಿಸಿ ಎಲ್ಲಾ ರೈತರಿಗೂ ಹಂಚಿಕೆ ಮಾಡಬೇಕು. ಅರಣ್ಯ ಭೂಮಿಯಲ್ಲಿ ಉಳಿಮೆ ಮಾಡುತ್ತಿರುವ ರೈತರ ಮೇಲೆ ಅರಣ್ಯಾಧಿಕಾರಿಗಳಿಂದ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು. ಮತ್ತು ರೈತರ ಮೇಲಿನ ಪ್ರಕರಣಗಳನ್ನು ರದ್ದು ಮಾಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ʼಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ಎಲ್ಲ ರೈತರಿಗೂ ಭೂಮಿ ಹಂಚಿಕೆ ಮಾಡಿ ಹಕ್ಕು ಪತ್ರ ನೀಡಬೇಕು.
ಎಲ್ಲಾ ಬಗರ್ ಹುಕುಂ ರೈತರಿಗೆ ಬ್ಯಾಂಕುಗಳಲ್ಲಿ ಸಾಲ ಸೇರಿ ಇತರ ಸೌಲಭ್ಯ ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು. ಉಳುಮೆ ಮಾಡುವ ಭೂಮಿಯನ್ನು ಅನ್ಯ ಕೆಲಸಕ್ಕಾಗಿ ಬಳಸಿಕೊಳ್ಳಲು ರೈತರನ್ನು ನಂಬಿಸಿ ಹಣ ಲೂಟಿ ಮಾಡುವ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಕ್ಫ್ ವಿರುದ್ಧ ಹೋರಾಟ : ಯತ್ನಾಳ ನೇತ್ರತ್ವದ ತಂಡಕ್ಕೆ ಬಿಜೆಪಿಗರಿಂದಲೇ ವಿರೋಧ!
ಈ ಪ್ರತಿಭಟನಾ ಧರಣಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ವಿ. ನಾಗಮ್ಮಾಳ್ ಜಿಲ್ಲಾ ಅಧ್ಯಕ್ಷ ಗಣಪತರಾವ್, ಜಿಲ್ಲಾ ಸಮಿತಿಯ ವಿಶ್ವನಾಥ್ ಸಿಂಗೆ, ಬಗರ್ ಹುಕುಂ ಸಾಗುವಳಿದಾರ ರೈತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮಹೇಶ್ ಎಸ್. ಬಿ., ಹಾಗೂ ಭಾಗಣ್ಣ ಬುಕ್ಕಾ, ನೀಲಕಂಠ ಎಂ. ಹುಲಿ, ಭೀಮಾಶಂಕರ್ ಆಂದೋಲಾ, ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯ ಸದಸ್ಯರಾದ ಅಮೃತ್ ಚವಾಣ್, ಶಿವರಾಮ್ ರಾಠೋಡ್, ಶಿವಕುಮಾರ್ ರಾಠೋಡ್, ಬಸವರಾಜ ಪುಜಾರಿ, ಮಲ್ಲಿಕಾರ್ಜುನ ಜಾನೆ, ಶಂಭುಲಿಂಗ ಪುಜಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.