ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಯರಗಲ್ ಗ್ರಾಮದಲ್ಲಿ ಇರುವ ಅಂಗನವಾಡಿ ಕೇಂದ್ರವು ಶಿಥಿಲಾವಸ್ಥೆಯಲ್ಲಿದ್ದು ಮೇಲ್ಚಾವಣೆಯಲ್ಲಿ ಬಿರುಕು ಬಿಟ್ಟಿದ್ದು ಪ್ರಾಣಾಪಾಯದಲ್ಲಿಯೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದ್ದು, ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ತಾಲೂಕಿನಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಯರಗಲ್ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ ಸ್ಥಿತಿ ಇದು. ಈ ಕಟ್ಟಡ ತುಂಬಾ ಹಳೆಯದಾಗಿದ್ದು, ಅದರ ಮೇಲ್ಛಾವಣಿಯ ರಾಡುಗಳು ಹೊರಬಂದಿದ್ದು, ಸಿಮೆಂಟ್ ಕಾಂಕ್ರೀಟ್ ಕಳಚಿ ಮಕ್ಕಳ ಮೇಲೆ ಬೀಳುತ್ತಿವೆ. ಇಷ್ಟಾದರೂ ಅಂಗನವಾಡಿ ಸ್ಥಳಾಂತರಕ್ಕೆ ಅಧಿಕಾರಿಗಳು ಮುಂದಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಯರಗಲ್ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ಒಂದು ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದೇ ಇರುವದರಿಂದ ಎರಡು ಕೇಂದ್ರಗಳನ್ನು ಇದೇ ಶಿಥಿಲಾವಸ್ಥೆ ಕಟ್ಟಡದಲ್ಲಿ ನಡೆಸುವ ಅನಿವಾರ್ಯತೆ ಇದೆ. ಇಲ್ಲಿ ಸುಮಾರು 53 ಮಕ್ಕಳು ಬರುತ್ತಾರೆ. ಶಿಥಿಲಾವಸ್ಥೆ ಕಟ್ಟಡದ ಹಿನ್ನಲೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.
ಕಟ್ಟಡದ ಸುತ್ತಲಿನ ಪರಿಸರವೂ ಸಂಪೂರ್ಣ ಹದಗೆಟ್ಟಿದ್ದು, ಗಿಡ ಗಂಟೆಗಳು ಬೆಳೆದಿವೆ. ಇಂತಹ ವಾತಾವರಣದಲ್ಲಿ ಮಕ್ಕಳು ಆರೊಗ್ಯದ ಗತಿ ಏನು? ಮಕ್ಕಳು ಇಂತ ಸ್ಥಳದಲ್ಲಿ ಅನಾರೊಗ್ಯಕ್ಕೆ ತುತ್ತಾಗುವ ಸಂಬವವೇ ಹೆಚ್ಚಾಗಿದೆ ಎನ್ನುತ್ತಾರೆ ಪೋಷಕರು.
ಅಲ್ಲದೆ, ಈ ಅಂಗನವಾಡಿ ಕೇಂದ್ರದಲ್ಲಿ ವಿದ್ಯುತ್ ಸೌಲಭ್ಯ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯದ ವ್ಯವಸ್ಥೆ ಇಲ್ಲ ಹಾಗೆಯೇ ಅಕ್ಕ ಪಕ್ಕದಲ್ಲಿ ಮತ್ತು ಎದುರುಗಡೆ ಚರಂಡಿ ನೀರು ಹರಿಯುತ್ತಿರುವುದರಿಂದ ಮಕ್ಕಳಿಗೆ ಆಟವಾಡಲು ಸ್ಥಳವೇ ಇಲ್ಲದಂತಾಗಿದೆ.
ಈ ಕುರಿತಾಗಿ ಅಂಗನವಾಡಿ ಕಾರ್ಯಕರ್ತೆಯರು ಮೇಲಾಧಿಕಾರಿಗಳು ಮತ್ತು ಸಂಬಂಧ ಜನಪ್ರತಿನಿಧಿಗಳಿಗೂ, ಪರಿಸ್ಥಿತಿ ಮತ್ತು ಗ್ರಾಮಸ್ಥರು ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಿರುವ ಕುರಿತು ಹಲವಾರು ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ಸಲ್ಲಿಸಿದ್ದರೂ ಕೂಡಾ ಯಾರು ಸ್ಪಂದಿಸದೇ ಇರುವದರಿಂದ ಅನಿವಾರ್ಯವಾಗಿ ಅದೇ ಶಿಥಿಲ ಕಟ್ಟಡದಲ್ಲಿ ಶಾಲೆ ನಡೆಸುತ್ತಿದ್ದು, ಏನಾದರೂ ಅನಾಹುತ ಸಂಬವಿಸುವದೋ ಎನ್ನುವ ಭಯದಲ್ಲಿ ಇದ್ದೇವೆ ಎಂದು ತಮ್ಮ ಆತಂಕ ತೋಡಿಕೊಳ್ಳುತ್ತಾರೆ.
ಮಕ್ಕಳ ಪಾಲಕರು ನಾಗಮ್ಮ ಮಾತನಾಡಿ, ಗ್ರಾಮದಲ್ಲಿ ಇರುವ ಹಳೆಯ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದ್ದು, ಶಿಕ್ಷಕಿಯರು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಆದರೆ, ಕಟ್ಟಡದ ಸುತ್ತ ಮುತ್ತ ಗಿಡ ಗಂಟೆಗಳು ಮತ್ತು ಜನರು ದನಕರುಗಳಿಗೆ ಮೇವು ಹಾಕಿದ್ದರಿಂದ ಅಲ್ಲೇಲ್ಲ ವಿಷಜಂತುಗಳು ಸುತ್ತಾಡುತ್ತಿವೆ. ಇಂತಹ ವಾತಾವರಣದಲ್ಲಿ ನಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಲು ತುಂಬಾ ಭಯವಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ನೂತನ ಕಟ್ಟಡ ಮಾಡಿ ಕೊಡಬೇಕು. ಇಲ್ಲವೇ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕ ಅಧಿಕಾರಿ ಆರತಿ ತುಪ್ಪದ್, ನೂತನ ಕಟ್ಟಡದ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಈ ಬಾರಿ 20 ಕಟ್ಟಡಗಳ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಯರಗಲ್ ಗ್ರಾಮದ ಅಂಗನವಾಡಿಯ ಹೆಸರಿಲ್ಲದ ಕಾರಣ ಮುಂದಿನ ಬಾರಿ ಮಂಜೂರು ಮಾಡುವ ಪಟ್ಟಿಯಲ್ಲಿ ಯರಗಲ್ ಅಂಗನವಾಡಿ ಹೆಸರು ಸೇರಿಸಲಾಗುವುದು ಎಂದಿದ್ದಾರೆ.
