ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಬಂದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಅಂಬೇಡ್ಕರ್ ಯುವ ಸೇನೆ ಸೇಡಂ ತಾಲ್ಲೂಕಾಧ್ಯಕ್ಷ ಗೋಪಾಲ ನಾಟೇಕಾರ ಬೇಸರ ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸರ್ಕಾರ ಕೋಟಿ-ಕೋಟಿ ಅನುದಾನ ವೆಚ್ಚದಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳು ಜಾರಿಗೊಳಿಸಿದರೂ ಫಲಿತಾಂಶ ಅತ್ಯಂತ ಕಳಪೆ ಬಂದಿರುವುದು ಜಿಲ್ಲೆಯ ಜನತೆಗೆ ನೋವು ತರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಲಿತಾಂಶ ಸುಧಾರಣೆಗೆ ಸರಿಯಾದ ಯೋಜನೆ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ಕೆಕೆಆರ್‌ಡಿಬಿ ಮತ್ತು ಜಿಲ್ಲಾಡಳಿತ ವಿಫಲವಾಗಿದೆ. ಫಲಿತಾಂಶ ಕಡಿಮೆ ಬಂದಿದ್ದನ್ನು ರಾಜಕೀಯ ನಾಯಕರು ತಲೆಕೆಡಿಸಿಕೊಳ್ಳುವುದಿಲ್ಲ. ಸ್ವಲ್ಪ ದಿನದ ನಂತರ ಎಂದಿನಂತೆ ಮರೆತುಬಿಡುತ್ತಾರೆ. ಆದರೆ ಈ ಭಾಗದ ಪ್ರತಿಭೆಯನ್ನು ನಿಧಾನವಾಗಿ ಚಿವುಟಿ ಹಾಕಲಾಗುತ್ತಿದೆ. ವೈದ್ಯಕೀಯ, ಇಂಜಿನಿಯರ್ ಸೇರಿದಂತೆ ಇತರ ಉನ್ನತ ಹುದ್ದೆಗಳಿಗೆ ಹೋಗುವ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಸಿಗದೇ ಇರುವುದು ವಂಚಿತರಾಗುತ್ತಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳು ಕನಿಷ್ಠ ಸಾಧನೆ ತೋರಿವೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಸಚಿವರು, ಶಾಸಕರು ಪಕ್ಷಾತೀತವಾಗಿ ತುರ್ತು ಸಭೆ ನಡೆಸಿ ಶಿಕ್ಷಣ ಪ್ರಗತಿ ಕುರಿತು ಚರ್ಚಿಸುವುದು ತುರ್ತಾಗಿ ನಡೆಸಿ, ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಗೋಪಾಲ ನಾಟೇಕರ್ ಒತ್ತಾಯಿಸಿದ್ದಾರೆ.