ಭವಿಷ್ಯದಲ್ಲಿ ಜೀವ ಸಂಕುಲದ ಉಳಿವು, ಬೆಳವಣಿಗೆಗಾಗಿ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಕಲಬುರಗಿ ಜಿಲ್ಲೆಯ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಸಂಜಯ ಪಾಟೀಲ ಅಭಿಪ್ರಾಯಪಟ್ಟರು.
ಆಳಂದ ಪಟ್ಟಣದ ಆದರ್ಶ ಶಾಲೆಯಲ್ಲಿ ಇಂದು ಇಕೋ ಕ್ಲಬ್ ವತಿಯಿಂದ ಏರ್ಪಡಿಸಿದ್ದ ʼಪರಿಸರ ಜಾಗೃತಿʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಅತೀ ವೃಷ್ಟಿ, ಅನಾವೃಷ್ಟಿ, ಜಾಗತಿಕ ತಾಪಮಾನ, ಭೂಕಂಪ, ಅಪಾಯಕಾರಿ ವೈರಸ್ ಹರಡುವಿಕೆಗೆ ಪರಿಸರದ ಅಸಮತೋಲನವೇ ಮುಖ್ಯ ಕಾರಣ. ಹಿಂದೆ ನಡೆದ ಸುನಾಮಿ, ಭೂಕಂಪಗಳಿಂದ ಆದ ಹಾನಿಯಿಂದ ಪರಿಸರ ಇನ್ನೂ ಚೇತರಿಸಿಕೊಳ್ಳಲಾಗಿಲ್ಲ. ಪ್ರಾಕೃತಿಕ ಸಂಪತ್ತು ಸಮೃದ್ಧವಾಗಿದ್ದರೆ ಮಾತ್ರ ನಾವೂ ಸುರಕ್ಷಿತರಾಗಿರುತ್ತೇವೆ” ಎಂದು ತಿಳಿಸಿದರು.
“ಗಿಡಮರಗಳ ಸಂರಕ್ಷಣೆ ಕಾರ್ಯ ಅರಣ್ಯ ಇಲಾಖೆ ಅಧಿಕಾರಿಗಳ ಜವಾಬ್ದಾರಿಗೆ ಮಾತ್ರ ಸೀಮಿತವಲ್ಲ. ಇಕೋ ಕ್ಲಬ್, ಹಸಿರು ಸೇನೆ, ಪರಿಸರ ಸಂಘಗಳ ಮೂಲಕವು ನಮ್ಮ ಸುತ್ತಲಿನ ಪ್ರಾಕೃತಿಕ ಸಂಪತ್ತು ಸಂವರ್ಧನೆಗೆ ಪೂರಕವಾಗುವಂತಹ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿಯೇ ಕೈಗೊಂಡು ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆ ಬೆಳೆಸುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ” ಎಂದರು.
ಇಕೋ ಕ್ಲಬ್ ಸಂಯೋಜಕಿ ಕೆ ಸೀಮಂತನಿ ಮಾತನಾಡಿ, ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಗಿಡ ಮರ ಬೆಳೆಸುವುದು, ನೀರಿನ ಅಪವ್ಯಯ ತಡೆಯುವುದು ಹಾಗೂ ಸ್ವಚ್ಛತೆ ಬಗ್ಗೆ ಕಾಳಜಿ ಬೆಳೆಸಿಕೊಂಡು ಪರಿಸರ ಸ್ನೇಹಿಯಾದ ಜೀವನ ಶೈಲಿ ರೂಢಿಸಿಕೊಳ್ಳಬೇಕು” ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ವಿಜಯ ವಿದ್ಯಾಲಯದಲ್ಲಿ ಗುರುವಂದನಾ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸೂರ್ಯಕಾಂತ ಕಾಂಬಳೆ, ಶಿಕ್ಷಕರಾದ ಸಿದ್ದಣ್ಣ ಮಾಹಿ, ಅಪ್ರೋಜಾ ಜರ್ದಿ, ಗೀತಾ ಬಲ್ಲಿದವ, ರಮೇಶ, ರಾಜೇಶ್ವರಿ ಲವಟೆ, ವಿಜಯಕುಮಾರ್, ಮಕ್ಕಳು ಭಾಗವಹಿಸಿದ್ದರು.
