ಬಸವಣ್ಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ಉಚ್ಚಾಟನೆ ಮಾಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸಿದೆ.
ಬೀದರ್‌ನಲ್ಲಿ ಯತ್ನಾಳ್ ನೀಡಿರುವ ಹೇಳಿಕೆ ಖಂಡಿಸಿ ಕಲಬುರಗಿಯ ಪ್ರತಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ ಅಶೋಕ ಘೂಳಿ, “ಶಾಸಕ ಯತ್ನಾಳ್ ಅವರು ವಕ್ಫ್ ಬೋರ್ಡ್ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಆದರೆ ಅವರು ಪ್ರತಿನಿಧಿಸುವ ವಿಜಯಪುರ ಕ್ಷೇತ್ರವೇ ಬಸವಣ್ಣನವರ ಜನ್ಮಭೂಮಿಯಾಗಿದೆ” ಎಂದು ಹೇಳಿದರು.
“ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಇವರಿಗೆ ಬಸನಗೌಡ ಎಂದು ನಾಮಕರಣ ಮಾಡಲಾಗಿದೆ. ಯಾವ ಧರ್ಮದಲ್ಲಿ ಇವರು ಜನ್ಮ ತಾಳಿದ್ದರೋ ಅದರ ಧರ್ಮದ ಸಂಸ್ಕೃತಿ, ಅರಿವು ಇಲ್ಲದೆ ಮತ್ತು ಅಧ್ಯಯನ ಮಾಡದೆ ಬಸವಣ್ಣನವರು ಧಿಕ್ಕರಿಸಿ ಬಂದ ವೈಧಿಕ ಧರ್ಮದ ಪ್ರತಿನಿಧಿಯಾಗಿ ವರ್ತಿಸುತ್ತಿದ್ದಾರೆ” ಎಂದು ಟೀಕಿಸಿದರು.
ಇದನ್ನು ಓದಿದ್ದೀರಾ? ಕುಟುಂಬ ರಾಜಕಾರಣದ ವಿರುದ್ಧದ ನನ್ನ ಹೋರಾಟ ನಿಲ್ಲಲ್ಲ: ಬಸನಗೌಡ ಪಾಟೀಲ್ ಯತ್ನಾಳ ಸ್ಪಷ್ಟನೆ
“ಇಡಿ ವಿಶ್ವದ ಅನೇಕ ರಾಷ್ಟ್ರಗಳು ಬಸವಣ್ಣನವರ ತತ್ವಗಳಿಗೆ ಮಾರುಹೋಗಿ ತತ್ವವನ್ನು ಅನುಷ್ಠಾನಗೊಳಿಸುತ್ತಿರುವಾಗ ಧರ್ಮದ ಗಂಧ ಗಾಳಿಯೂ ಅರಿಯದೆ ಸ್ವಾರ್ಥ ರಾಜಕಾರಣಕ್ಕಾಗಿ ಸ್ವಾಭಿಮಾನವನ್ನು ಮರೆತು ದೀಪದ ಕೆಳಗೆ ಕತ್ತಲು ಎನ್ನುವಂತೆ ಬಸವಣ್ಣನವರ ಮರಣದ ಬಗ್ಗೆ ಹಗುರವಾಗಿ ಹೇಳಿಕೆ ನೀಡಿರುವ ಅಜ್ಞಾನಿ ಬಸನಗೌಡ ಪಾಟೀಲ ಯತ್ನಾಳ್ ಅರವರನ್ನು ಶಾಸಕ ಸ್ಥಾನದಿಂದ ಉಚ್ಚಾಟನೆ ಮಾಡಬೇಕು” ಎಂದು ಆಗ್ರಹಿಸಿದರು.
“ಬಹು ಸಂಖ್ಯಾತರಾಗಿರುವ ಬಸವಣ್ಣನವರ ಅನುಯಾಯಿಗಳಿಗೆ ಇವರ ಹೇಳಿಕೆಯಿಂದ ನೋವುಂಟಾಗಿದೆ. ಸಮಾಜದಲ್ಲಿ ಶಾಂತಿ ಕದಡಿದ್ದು ದಂಗೆ ಏಳುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಕಾನೂನು ಪ್ರಕಾರವಾಗಿ ಯತ್ನಾಳ್ ಅವರನ್ನು ಶಿಕ್ಷೆಗೆ ಒಳಪಡಿಸಬೇಕೆಂದು” ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟ್ಟಿಗಾರ್, ಅಧ್ಯಕ್ಷ ಭಧುಲಿಂಗ ಮುಂದರ, ಪ್ರಭುಲಿಂಗ ಮಹಾಗಾಂವಕರ್, ಸಂಗಮೇಶ ಗುಬ್ಬೇವಾಡ, ಶಶಿಕಾಂತ ಪಸಾರ್, ಹಣಮಂತ ರಾವ್ ಪಾಟೀಲ್, ಅಂಬಾರಾಯ ಬಿರಾದಾರ್, ಮಹಾಂತೇಶ ಕಲಬುರಗಿ, ಐಯನಗೌಡ ಪಾಟೀಲ್, ಎಸ್.ವಿ ನಿಂಗಪ್ಪ, ಶಾಂತಪ್ಪಾ ಪಾಟೀಲ್, ಬಸವರಾಜ ಕೋಣನ್ ಇನ್ನಿತರರು ಉಪಸ್ಥಿತರಿದ್ದರು.