ರೈತರ ಕಬ್ಬಿನ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಅಫಜಲಪುರ ಘಟಕದಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
“ಕಬ್ಬಿನ ಹಿಂದಿನ ಬಾಕಿ ಹಣ ಬಿಡುಗಡೆ ಮಾಡಲು ಆದೇಶ ಹೊರಡಿಸಿದರೂ ಕೂಡಾ ಬಾಕಿ ಹಣ ಕೊಡದ ಸಕ್ಕರೆ ಕಾರ್ಖಾನೆಗಳ ರೈತ ವಿರೋಧಿ ನೀತಿ ಖಂಡನೀಯ. ಮೊನಟಗಾ ಗೂಳುರು ಬ್ರಿಜ್ ಕಂ ಬ್ಯಾರೇಜ್ ಗೆ ಗೇಟ್ ಕೂಡಿಸಿ ರೈತರ ಜಮೀನುಗಳಿಗೆ ನೀರು ಹರಿಸಬೇಕು. ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು. ಬಾಕಿಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು” ಎಂದು ಒತ್ತಾಯಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ಮಾಡುವುದರ ಮೂಲಕ ಕರ್ನಾಟಕ ನೀರಾವರಿ ನಿಗಮ ನಿಯಮಿತ(ಕೆಎನ್ಎನ್ಎಲ್) ಮುಖ್ಯ ಎಂಜಿನಿಯರ್ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಮಾತನಾಡಿ, “ರೈತರ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ 2023-24ನೇ ಸಾಲಿನಲ್ಲಿ ಆಯುಕ್ತರು ನಿಗದಿಪಡಿಸಿರುವ ದರಕ್ಕೆ ಅನುಗುಣವಾಗಿ ಸಕ್ಕರೆ ಕಾರ್ಖಾನೆ ಮಾಲೀಕರುಗಳು ನಡೆದುಕೊಳ್ಳದೆ ಇರುವುದು ಹಾಗೂ ಕಬ್ಬು ಕಟಾವಾದ 14 ದಿನದೊಳಗೆ ಹಣಪಾವತಿ ಮಾಡದಿರುವುದು ತುಂಬಾ ಖೇದಕರ ಸಂಗತಿಯಾಗಿದೆ” ಎಂದರು.
“ಕಬ್ಬು ಬೆಳೆಗಾರರ ಹಿಂದಿನ ಬಾಕಿಹಣ ಕೊಡಬೇಕೆಂದು ರಾಜ್ಯ ಸರ್ಕಾರದ ಕಬ್ಬು ಅಭಿವೃದ್ಧಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆದರೆ ಈವರೆಗೆ ಸಕ್ಕರೆ ಕಾರ್ಖಾನೆಗಳು ಒಂದು ನಯಾ ಪೈಸೆ ಹಣ ಕೊಟ್ಟಿಲ್ಲ. ಸಚಿವರು ಇದರ ಬಗ್ಗೆ ಮಾತನಾಡಿ ಕಬ್ಬು ಬೆಳೆಗಾರರ ನೆರವಿಗೆ ಬರಬೇಕು” ಎಂದು ರೈತ ಸಂಘದ ಪರವಾಗಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸ್ವಚ್ಛತಾ ಭಾಗ್ಯ ಕಾಣದ ಅಂಕಲಗಾ ಗ್ರಾಮ
“ರೇಣುಕಾ ಶುಗರ್ಸ್ ಹಾವಳಗಾ ಸಕ್ಕರೆ ಕಾರ್ಖಾನೆ ಒಟ್ಟು 23,000 ಮಂದಿ ರೈತರ ಒಟ್ಟು 10 ಲಕ್ಷ ಟನ್ ಎಫ್ಅರ್ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ ₹112ರಂತೆ ಹತ್ತು ಲಕ್ಷ ಟನ್ನಿನ ಬಾಕಿ ಹಣ ಕೊಡಬೇಕು. ಕೆಆರ್ಪಿ ಚಿಣಮಗೆರಾ ಸಕ್ಕರೆ ಕಾರ್ಖಾನೆಯಲ್ಲಿ ಎಫ್ಆರ್ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 162 ರೂಪಾಯಿಯಂತೆ ಒಟ್ಟು 25,000 ಮಂದಿ ರೈತರ ಒಟ್ಟು 11 ಲಕ್ಷ ಟನ್ ಕಬ್ಬಿನ ಬಾಕಿ ಹಣ ಕೊಡಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿರಾದಾರ ಸಿದ್ದರಾಮ ದಣ್ಣೂರು, ಅಶೋಕ ಬಿ ಹೂಗಾರ್, ಶಿವಯೋಗಪ್ಪಾ, ಪ್ರಕಾಶ ಜಾನೆ, ದೇವು ಗುತ್ತೆದಾರ, ಚಂದಪ್ಪಾ ಪೂಜಾರಿ ಹಾವುನೂರು, ಅಂಬರಾಯ ಎಸ್ ಜಯಪ್ಪಗೊಳ ಸೇರಿದಂತೆ ಇತರರು ಇದ್ದರು.