ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಮತ್ತು ಬೇಸಿಗೆ ಬೆಳೆಗಳಿಗೆ ಅನುಕೂಲವಾಗುವಂತೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟಿಸಿರುವ ರೈತರು, ಕಲಬುರಗಿ ಜಿಲ್ಲಾಧಿಕಾರಿಗೆ ಬೇಡಿಕೆ ಪತ್ರ ಸಲ್ಲಿಸಿದರು.
ಆಲಮಟ್ಟಿ ಜಲಾಶಯದಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಭಾಗವಾಗಿ ಹರಿಯುವ ನೀರನ್ನೇ ನಂಬಿರುವ ಜನರು ಕಂಗಾಲಾಗಿದ್ದಾರೆ. ಶೇಂಗಾ ಮತ್ತು ಕಬ್ಬು ಬೆಳೆಗಾರರು ಪರಿತಪಿಸುತ್ತಿದ್ದಾರೆ. ಕುಡಿಯುವ ನೀರಿಗೂ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ, ಅಫಜಲಪುರ ಮತ್ತು ಜೇವರ್ಗಿ ಭಾಗದ ಸರಿಸುಮಾರು 50 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.
ದನಕರುಗಳಿಗೆ, ಪ್ರಾಣಿಪಕ್ಷಿಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗುವಂತೆ ಸೊನ್ ಬ್ಯಾರೇಜ್‌ನಿಂದ ಮತ್ತು ಆಲಮಟ್ಟಿ ಡ್ಯಾಮ್‌ನಿಂದ 2 ಟಿಎಂಸಿ ನೀರು ಹರಿಸಬೇಕು. ಮಹಾರಾಷ್ಟ್ರದ ಉಜ್ಜನಿ ಡ್ಯಾಮ್‌ನಿಂದ ನಮ್ಮ ನೀರಿನ ಪಾಲು ಕೊಡಬೇಕು. ಘಾಣಗಾಪುರ ದತ್ತಾತ್ರೇಯ ಕ್ಷೇತ್ರದ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ರಸ್ತೆ ತಡೆಯನ್ನೂ ಮಾಡಲಾಯಿತು.
ಪ್ರತಿಭಟನೆ ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, “ಈಗಾಗಲೇ ಕಲಬುರಗಿ ಜಿಲ್ಲೆಯ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸಾಲದ ಬಾಧೆ ತಾಳಲಾರದೆ ಸರಣಿ ರೈತರ ಆತ್ಮಹತ್ಯೆಯ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ರೈತರ ಒಕ್ಕಲುತನ ಬೀದಿಪಾಲಾಗುತ್ತಿವೆ. ಕೋಟಿ ವಿದ್ಯೆಗೆಗಿಂತ ಮೇಟಿ ವಿದ್ಯೆ ಮೇಲು ಎಂಬ ಗಾದೆಯ ಮಾತು ಹುಸಿಯಾಗಿದೆ. ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಂಪೂರ್ಣವಾಗಿ ನೆಲ ಕಚ್ಚಿ ಹೋಗಿದೆ. ಬೆಂಬಲ ಬೆಲೆ ಇಲ್ಲದೆ ಅನ್ನದಾತರು ನೇಣಿಗೆ ಶರಣಾಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮನ್ನು ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಬಗ್ಗೆ ತಿರುಗಿಯೂ ನೋಡುತ್ತಿಲ್ಲ. ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ. ಬರಿ ಮೊಸಳೆ ಕಣ್ಣೀರು ಸುರಿಸುತ್ತಿರುವ ರೈತ ವಿರೋಧಿ ನೀತಿ ಕೈ ಬಿಟ್ಟು ರೈತರ ನೆರವಿಗೆ ಧಾವಿಸಿ, ಇದ್ದ ಅಲ್ಪ ಸ್ವಲ್ಪ ಬೇಸಿಗೆ ನೀರಾವರಿ ಬೆಳೆಗಳಿಗೆ ನೀರು ಹರಿಸಬೇಕು. ಘಾಣಗಾಪುರ ದತ್ತ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಹದಗೆಟ್ಟು ಗಬ್ಬು ನಾರುತ್ತಿದೆ. ಅನಿವಾರ್ಯವಾಗಿ ಗಲೀಜು ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.
“ಆಲಮಟ್ಟಿ ಡ್ಯಾಮ್ ನಿಂದ ನಾರಾಯಣಪುರ ಹಾಗೂ ಕೃಷ್ಣಾ ಮೇಲ್ದಂಡೆ ಕಾಲುವೆ ಮೂಲಕ ಅಫಜಲಪುರ ತಾಲೂಕಿನ ಸೊನ್ ಬ್ಯಾರೆಜ್ ನಲ್ಲಿ ಸ್ಪೋಟರೆಜ್ ಮಾಡಲಾಗಿದೆ. ಈಗಾಗಲೇ 1.5 ಟಿ ಎಮ್ ಸಿ ನೀರು ಶೇಖರಣೆಯಾಗಿದ್ದು ನಂತರ ಘತ್ತರ್ಗಿಯಿಂದ ಘಾಣಗಾಪುರದವರೆಗೆ ನೀರು ಹರಿಸಬೇಕೆಂದು ರೈತರ ಒತ್ತಾಯವಾಗಿದೆ. ಬೇಸಿಗೆ ಬೆಳೆಗಳಾದ ಕಬ್ಬು ಮತ್ತು ಬೇಸಿಗೆ ಶೇಂಗಾಗೆ, ದನಕರುಗಳಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಮತ್ತು ಸಾರ್ವಜನಿಕ ಕುಡಿಯುವ ನೀರಿಗಾಗಿ ಸುಮಾರು 50 ಹಳ್ಳಿಗಳಿಗೆ ಈ ಡ್ಯಾಮ್ ಮೂಲಕ ನೀರು ಸರಬರಾಜು ಆಗುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ರೈತರ ಉಳಿವಿಗಾಗಿ ನೀರು ಬಿಡಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದರು.
ಇದನ್ನೂ ಓದಿ: ಕಲಬುರಗಿ | ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಕೊಲೆ
ಈ ಸಂದರ್ಭದಲ್ಲಿ ಕೆಪಿಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದರಾಮ ಧಣ್ಣೂರು ಅಣ್ಣರಾವಗೌಡ ಪಾಟೀಲ್, ಅಶೋಕ ಹೂಗಾರ್, ಶಿವುರಾಯ ಪೂಜಾರಿ, ವಿಠಲ್ ಕಿರಸಾವುಸಳಗಿ, ಭೀಮಾ ಅಮರ್ಜಾ, ಭೀಮರಾವ್ ಪಾಟೀಲ್, ಶಿವರಾಯ ಚಿಂಚೋಳಿ, ಸಿದ್ದಪ್ಪ ಕಿರಸಾವುಳಿ, ಶ್ರೀಶೈಲ ಗೌಡ ಪಾಟೀಲ್, ದತ್ತಗುರು ಬಿದನೂರು, ಶಿವರಾಯ ದೊಡ್ಡಮನಿ, ಯಲ್ಲಪ್ಪಾ ಬಟಗೇರಿ, ಭೀಮರಾಯ, ಮಿಸ್ಮಾ ಶರಣಗೌಡ ಬಟಗೇರಿ, ಸುಭಾಷ್ ಹೊಸ ಮನಿ ದಿಲೀಪ್ ನಾಗೂರೆ ರಾಯಪ್ಪ ಹುರುಮುಂಜಿ ದೇವು ಬಿರಾದರ ಇನ್ನಿತರರು ಉಪಸ್ಥಿತರಿದ್ದರು.