ಬೆಳೆಗಳ ರಕ್ಷಣೆಗೆ ಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡುವಾಗ ರೈತನ ದೇಹಕ್ಕೆ ಸೇರಿದ್ದು, ಚಿಕಿತ್ಸೆ ಫಲಕಾರಿಯಾಗದೆ ರೈತ ಮೃತಪಟ್ಟ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಈ ಬೆನ್ನಲ್ಲೇ, ಮತ್ತೆ ನಾಲ್ವರು ರೈತರ ದೇಹಕ್ಕೆ ಕ್ರಿಮಿನಾಶಕ ಸೇರಿ, ಆ ರೈತರು ಅಸ್ವಸ್ಥಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆರ್.ಬಿ ನಗರ ತಾಂಡಾದ ಒಂದೇ ಕುಟುಂಬದ ಸುನೀಲ್ ಜಾಧವ್(34), ಅನೀಲ್ ಜಾಧವ್(22), ಕುಮಾರ್(30) ಮತ್ತು ಖೇಮು ರಾಠೋಡ್(32) ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಲ್ವರು ರೈತರು ಕಳೆದ ಗುರುವಾರ ತಮ್ಮ ಜಮೀನಿನಲ್ಲಿ ಬೆಳದಿದ್ದ ಹತ್ತಿ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಹೋಗಿದ್ದರು. ಹತ್ತಿ ಎಲೆಗಳಿಗೆ ಬರುವ ಎಲೆ ಚುಕ್ಕಿ ರೋಗ ಸೇರಿದಂತೆ ಇನ್ನಿತರ ಸಮಸ್ಯೆಗಳ ನಿವಾರಣೆಗೆ ಮೋನೋಕ್ರೋಟಾಪಸ್ ಸಿಂಪಡಣೆ ಮಾಡಿದ್ದರು.
ಕ್ರಿಮಿನಾಶಕ ಸಿಂಪಡಣೆ ಮಾಡುವಾಗ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ ಮಾರನೇ ದಿನದಿಂದ ಈ ನಾಲ್ವರಿಗೂ ಕೂಡ ವಾಂತಿ ಭೇದಿ, ತಲೆಸುತ್ತು ಆರಂಭವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಆರೋಗ್ಯ ಸುಧಾರಿಸಿಲ್ಲ. ಹೀಗಾಗಿ, ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೈತರು ಯಾವುದೇ ಸುರಕ್ಷಿತ ಕ್ರಮ ಕೈಗೊಳ್ಳದೇ ಇರುವುದರಿಂದ ಬಾಯಿ ಮತ್ತು ಮೂಗಿನ ಮೂಲಕ ಕೀಟನಾಶಕ ದೇಹಕ್ಕೆ ಸೇರಿದೆ. ನಾಲ್ವರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
“ಕಳೆದ ವಾರದ ಹಿಂದೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ತರ್ಕಸಪೇಟ್ ಗ್ರಾಮದ ಅಂಬರೀಶ್(26) ಎಂಬ ಯುವರೈತ ತನ್ನ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಿ ಮನೆಗೆ ಬಂದ ಬಳಿಕ ವಾಂತಿಭೇದಿ ಆರಂಭವಾಗಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ರೈತ ಅಂಬರೀಶ್ ಮೃತಪಟ್ಟಿದ್ದರು” ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಾವಿನಕೆರೆ ಸಂರಕ್ಷಣೆಗೆ ಆದೇಶ
“ಮದುವೆಯಾಗಿ ಒಂದು ವರ್ಷ ಮಾತ್ರವಾಗಿತ್ತು. ಆದರೆ, ಹತ್ತಿ ಬೆಳೆ ರಕ್ಷಿಸಿಕೊಳ್ಳಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದರು. ಇದೀಗ ಮತ್ತೆ ನಾಲ್ವರು ರೈತರು ಕ್ರಿಮಿನಾಶಕ ಸಿಂಪಡಣೆ ಮಾಡುವಾಗ ದೇಹಕ್ಕೆ ಸೇರಿ ಅಸ್ವಸ್ಥಗೊಂಡು ಜೀವನ್ಮರಣದೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ರೈತರು ಕ್ರಿಮಿನಾಶಕ ಸಿಂಪಡಿಸುವ ಸಂದರ್ಭದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು ಮತ್ತು ಮುಂಜಾಗ್ರತಕ್ರಮವಾಗಿ ದೇಹಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕ್ರಿಮಿನಾಶಕ ದೇಹಕ್ಕೆ ಸೇರಿದರೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ವಿಳಂಬವಾದರೆ ಸಾವು ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ರೈತರು ತಮ್ಮ ಬೆಳೆ ರಕ್ಷಣೆಗೆ ಹೋಗಿ ಅಪಾಯ ತಂದುಕೊಳ್ಳಬಾರದು” ಎಂದು ರೈತರಿಗೆ ಸಲಹೆ ನೀಡಿದ್ದಾರೆ.