ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಕೃಷಿ ವಿಮೆ ಸೌಲಭ್ಯ ಪಡೆದಿದ್ದ ರೈತರಿಗೆ ಅಧಿಕಾರಿಗಳು ಮೋಸ ಮಾಡಿದ್ದು, ವಿಮೆ ಮಾಡಿಸದೇ ಇರುವವರ ಖಾತೆಗೆ ಹಣ ಜಮಾ ಮಾಡಿದ್ದಾರೆ. ಅಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಅರ್ಹ ರೈತರಿಗೆ ವಿಮೆ ಹಣ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.
ಕಲಬುರಗಿಯಲ್ಲಿ ಪ್ರತಿಭಟನೆ ನೆಡೆಸಿರುವ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಶರಣಬಸಪ್ಪ ಶೆಟ್ಟಿ, “ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಜಿಲ್ಲೆಯ 1,88,000 ಮಂದಿ ರೈತರು 161 ಕೋಟಿ ರೂಪಾಯಿ ವಿಮೆ ಹಣ ಕಟ್ಟಿದ್ದಾರೆ. ಆ ಪೈಕಿ, ಕೇವಲ 91 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದೆ. ಉಳಿದ ಹಣ ಬಿಡುಗಡೆಯಾಗಿಲ್ಲ. ಕೂಡಲೇ ಬಾಕಿ ವಿಮೆ ಹಣ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ವಿಮೆ ಹಣಕ್ಕಾಗಿ ಅರ್ಜಿ ಸಲ್ಲಿಸಿದ ರೈತರ ಖಾತೆಗೆ ವಿಮೆ ಹಣ ಜಮಾ ಮಾಡದೇ, ವಿಮೆ ಮಾಡಿದಸ ರೈತರಿಗೆ ಹಣ ಜಮಾ ಮಾಡಿ ದಲ್ಲಾಳಿಗಳು ಹಣ ದೋಚಿದ್ದಾರೆ. ಅವರೊಂದಿಗೆ ಕೆಲವು ಅಧಿಕಾರಿಗಳು ಕೈಜೋಡಿಸಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಅಮಾನತುಗೊಳಿಸಿ, ಕ್ರಿಮಿನಲ್ ಕೇಸ್ ದಾಖಲಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಜಿಲ್ಲೆಯಲ್ಲಿ ಬರಗಾಲ ವ್ಯಾಪಿಸಿದೆ. ಆದರೂ, ಬರ ಪೀಡಿತ ಪ್ರದೇಶವೆಂದು ಘೋಷಿಸಿಲ್ಲ. ಕೂಡಲೇ ಬರ ಪೀಡಿತ ಪ್ರದೇಶವೆಂದು ಘೋಷಿಸಿ, ಪರಿಹಾರ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಪ್ರಕಾಶ ಜಾನೆ, ಪದ್ಮಿನಿ ಕಿರಮಗಿ, ದಿಲೀಪ್ ಕುಮಾರ್, ರಾಯಪ್ಪ ಹುರಮುಂಜಿ, ರೇವಣಸಿದ್ದಪ್ಪ ಆಲಗೂಡ, ಜಾಫರ್ ಖಾನಸಾಬ್, ಸಿದ್ದಾರ್ಥ್ ಠಾಕೂರ್, ಕ್ಷೇಮಲಿಂಗ ಭಂಕೂರ, ಕಾವೇರಿ ಭಂಕೂರ ಇದ್ದರು.