ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಗೆ ಕವಿ ಡಾ. ಪಿ ನಂದಕುಮಾರ್ ಅವರ “ಹಂಗಿನ ಕಿರೀಟಕ್ಕೆ ಜೋತುಬಿದ್ದ ನಾಲಿಗೆ” ಎಂಬ ಕವನ ಸಂಕಲನ ಆಯ್ಕೆಯಾಗಿದೆ ಎಂದು ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಪಿ ಎಂ ನರಸಿಂಹಮೂರ್ತಿ ತಿಳಿಸಿದ್ದಾರೆ.
ಚಾಮರಾಜನಗರದ ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆಯು ಖ್ಯಾತ ಸಾಹಿತಿ-ಕವಿ ಮುಳ್ಳೂರು ನಾಗರಾಜ ಅವರ ಹೆಸರಿನಲ್ಲಿ ಪ್ರತಿವರ್ಷ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಪ್ರಸ್ತುತ ಹದಿನಾಲ್ಕನೇ ವರ್ಷದ ಕಾವ್ಯ ಪ್ರಶಸ್ತಿಗೆ ಡಾ. ಪಿ ನಂದಕುಮಾರ ಅವರ ಕವನ ಸಂಕಲನ ಆಯ್ಕೆಯಾಗಿದೆ. ಈ ಪ್ರಶಸ್ತಿಯು ತಲಾ ಹತ್ತು ಸಾವಿರ ನಗದು. ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ.
ಪುಸ್ತಕದ ಕುರಿತು ವಿಮರ್ಶಕ ವಿಕ್ರಮ ವಿಸಾಜಿಯವರು, “ಹೊಸ ತಲೆಮಾರಿನ ನುಡಿಗಟ್ಟಿನ ಪ್ರತಿಬಿಂಬಗಳು, ಅಂದರೆ ರೂಪಕಾತ್ಮಕತೆ, ಪ್ರಭುತ್ವದ ಕುಟಿಲತೆಯ ಅನಾವರಣ, ಸಮುದಾಯಗಳ ಅವಮಾನದ ಅಭಿವ್ಯಕ್ತಿ ಮತ್ತು ಪ್ರೇಮದ ಉನ್ಮಾದ ಎಲ್ಲವೂ ಒಟ್ಟಿಗೆ ಒಂದೇ ತೊರೆಯಲ್ಲಿ ಹರಿಯುತ್ತಿರುವ ವಿಭಿನ್ನ ಅಲೆಗಳು” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮುಸ್ಲಿಮ್ ಒಕ್ಕೂಟದ 25ನೇ ವರ್ಷದ ವಾರ್ತಾ ಸಂಚಯ ಬಿಡುಗಡೆ
“ಅಲೆಗಳು ಬೇರೆಬೇರೆಯಾದರೂ ಒಂದನ್ನೊಂದು ಪ್ರಭಾವಿಸಿವೆ. ಹಾಗೆ ಪ್ರಭಾವಿಸದೇ ಇರಲು ಸಾಧ್ಯವೇ ಇಲ್ಲದಂಥ ವ್ಯಕ್ತಿ ಮತ್ತು ಪರಿಸರ ಪರಸ್ಪರ ಎದುರುಬದುರಾಗಿದ್ದಾರೆ. ಕವಿತೆಯಲ್ಲಿ ಹಲವು ಸಂವೇದನೆಗಳು ಕಲೆತು ಹೋದಾಗ ಏನಾಗುತ್ತದೆ? ಅವು ಪ್ರೇಮವನ್ನು ಹೇಳುತ್ತಲೇ ತನ್ನ ಸಮುದಾಯದ ಆತಂಕಗಳನ್ನೂ ಹೇಳುತ್ತವೆ. ಫ್ರಭುತ್ವದ ಬಲತ್ಕಾರವನ್ನು ತೋರಿಸುತ್ತಲೇ ತನ್ನು ಅಸ್ತಿತ್ವದ ದುಗುಡಗಳನ್ನೂ ಕಾಣಿಸುತ್ತವೆ” ಎಂದು ವಿಮರ್ಶಿಸಿದ್ದಾರೆ.