ಮದ್ಯ ಕುಡಿದು ಶಾಲೆಗೆ ಬಂದು ಶಾಲೆಯಲ್ಲೇ ಮಲಗಿದ್ದ ಆರೋಪ ಹಿನ್ನೆಲೆ ಕಾಳಗಿ ತಾಲ್ಲೂಕಿನ ಸಾಸರಗಾಂವ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶಂಕರ ರಾಠೋಡ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಚಿಂಚೋಳಿ ಬಿಇಒ ವಿ.ಲಕ್ಷ್ಮಯ್ಯ ಗುರುವಾರ ಆದೇಶಿಸಿದ್ದಾರೆ.
ಶಿಕ್ಷಕ ಶಂಕರ ರಾಠೋಡ್ ಅವರು ಬುಧವಾರ (ಮಾ.5) ರಂದು ಮಧ್ಯಾಹ್ನ ಮದ್ಯ ಸೇವಿಸಿ ಶಾಲೆಗೆ ಬಂದಿದ್ದರು. ಶಾಲಾ ಕಚೇರಿಯಲ್ಲೇ ಮಲಗಿದ್ದನ್ನು ಪ್ರಶ್ನಿಸಿದ ಪೋಷಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ನಿತ್ಯ ಶಾಲಾ ಸಮಯ ಪಾಲಿಸುವುದಿಲ್ಲ. ಅಂದು ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟ ವಿತರಿಸಿರುವುದಿಲ್ಲ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ವರದಿ ನೀಡಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಕಲಬುರಗಿಯ ಹೆಚ್ಚುವರಿ ಆಯುಕ್ತರು ಗುರುವಾರ (ಮಾ.6) ರಂದು ದೂರವಾಣಿ ಮೂಲಕ ಆದೇಶಿಸಿದಂತೆ, ಪ್ರಭಾರ ಮುಖ್ಯಶಿಕ್ಷಕ ಶಂಕರ ರಾಠೋಡ ಅವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮ (ನಡತೆ)ಗಳ ಉಲ್ಲಂಘನೆ, ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಬಿಇಒ ಆದೇಶದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ನಕಲಿ ವಿದ್ಯಾರ್ಥಿನಿ ಪೊಲೀಸ್ ವಶಕ್ಕೆ
ಬಿಇಒ ವಿ.ಲಕ್ಷ್ಮಯ್ಯ, ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ದೇಶಕ ಜಯಪ್ಪ ಚಾಪಲ್, ಸಿಆರ್‌ಪಿ ಶಿವಶರಣಪ್ಪ ಹೊಸಳ್ಳಿ ಗುರುವಾರ ಮಧ್ಯಾಹ್ನ ಶಾಲೆಗೆ ಭೇಟಿ ನೀಡಿ ಪ್ರಭಾರ ಮುಖ್ಯಶಿಕ್ಷಕ ಶಂಕರ ರಾಠೋಡ ಅವರಿಗೆ ಅಮಾನತು ಆದೇಶ ನೀಡಿದರು.