ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ವೈದ್ಯರು ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಜೇವರ್ಗಿ ತಾಲೂಕು ಜೇನಾಪುರ ಗ್ರಾಮದ ನಾಗಣ್ಣ (54) ಎಂಬುವವರು ಆಯತಪ್ಪಿ ಬಿದ್ದಿದ್ದ ವೇಳೆ ಹೊಟ್ಟೆಯ ಭಾಗಕ್ಕೆ ಮಂಚ ಬಡಿದಿತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ತನ್ನ ಮಗನೊಂದಿಗೆ ಕಲಬುರಗಿಯಲ್ಲಿರುವ ಯುನೈಟೆಡ್ ಆಸ್ಪತ್ರೆಗೆ ದಾಖಲಾಗಿದ್ದರು.
ತಪಾಸಣೆ ನಡೆಸಿದ್ದ ಆಸ್ಪತ್ರೆಯ ವೈದ್ಯರು, ಹೊಟ್ಟೆಗೆ ಪೆಟ್ಟು ಬಡಿದಿರುವುದರಿಂದ ಹೊಟ್ಟೆಯೊಳಗೆ ರಕ್ತ ಹೆಪ್ಪುಗಟ್ಟಿದೆ. ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ ಬಳಿಕ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ, ಆಪರೇಷನ್ ಆದ ಬಳಿಕ ವ್ಯಕ್ತಿಯು ದಿಢೀರನೆ ಕೋಮಾಕ್ಕೆ ಜಾರಿದ್ದಾರೆ. 10 -15 ದಿನಗಳು ಕೋಮಾದಲ್ಲಿದ್ದ ವ್ಯಕ್ತಿ ಇಂದು ಸಾವನ್ನಪ್ಪಿದ್ದಾರೆ. ಇದಕ್ಕೆ ವೈದ್ಯರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆಯ ಮುಂದೆ ಧರಣಿ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
“10 -15 ದಿನಗಳು ಕೋಮಾದಲ್ಲಿದ್ದರೂ ರೋಗಿಯ ಆರೋಗ್ಯದ ಕುರಿತು ಏನೂ ಸರಿಯಾದ ಮಾಹಿತಿ ನೀಡಿಲ್ಲ. ಈಗ ಸಾವನ್ನಪ್ಪಿದ್ದಾರೆ. ಲಕ್ಷಗಟ್ಟಲೆ ಬಿಲ್ ಮಾಡಿದ್ದಾರೆ. ಅಲ್ಲದೇ, ವೈದ್ಯರು ಬರೆದಿದ್ದ ಔಷಧಿಯನ್ನು ಸರಿಯಾಗಿ ಗಮನಿಸದೆ, ಮೆಡಿಷನ್ ಸರಿಯಾಗಿ ಅರಿತುಕೊಳ್ಳದೆ ಔಷಧಿಯವರು ಕೂಡ ಎರಡು ಬಾರಿ ತಪ್ಪಾಗಿ ಔಷಧಿ ಕೊಟ್ಟಿದ್ದಾರೆ. ಇದರಿಂದಾಗಿಯೇ ಚಿಕಿತ್ಸೆ ಫಲಕಾರಿಯಾಗದೇ ನಮ್ಮ ಕುಟುಂಬದ ವ್ಯಕ್ತಿ ಸಾವ್ವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ದೊಡ್ಡ ಅವ್ಯವಹಾರ ನಡೆಯುತ್ತಿದೆ” ಎಂದು ಯುನೈಟೆಡ್ ಆಸ್ಪತ್ರೆಯ ಎದುರುಗಡೆ ಪ್ರತಿಭಟನೆ ನಡೆಸಿದರು.
ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಆಸ್ಪತ್ರೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ರೋಗಿಗಳ ಜೀವದೊಂದಿಗೆ ಆಸ್ಪತ್ರೆ ಆಟವಾಡುತ್ತಿದೆ. ಹಾಗಾಗಿ, ಇದನ್ನು ಮುಚ್ಚಬೇಕು ಎಂದು ವೈದ್ಯಾಧಿಕಾರಿ ಹಾಗೂ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
