ಹಾಸ್ಟೆಲ್ ವಾರ್ಡನ್ ಅಮಾನತು ಮಾಡಿರುವುದನ್ನು ಖಂಡಿಸಿ ಹಾಗೂ ಹಾಸ್ಟೆಲ್‌ನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮೆಟ್ರಿಕ್ ನಂತರ ಸ್ನಾತಕೋತ್ತರ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಧರಣಿ ನಡೆಸಿದರು.
ಕಲಬುರಗಿ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಎರಡು ದಿನಗಳಿಂದ ಹಾಸ್ಟೆಲ್ ಗೇಟ್ ಮುಚ್ಚಿ ಪ್ರತಿಭಟನೆ ನಡೆಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದ್ದಾರೆ.
ವಸತಿ ನಿಲಯದಲ್ಲಿ ಎರಡು ದಿನಗಳಿಂದ ಬಳಸಲು ನೀರು ಇಲ್ಲದೇ ಇರುವುದರಿಂದ ಹಾಗೂ ವಸತಿ ನಿಲಯದ ಶೌಚಾಲಯಗಳು ಸ್ನಾನ ಕೋಣೆ ಬ್ಲಾಕ್ ಆಗಿದ್ದು ಅದನ್ನು ಕೂಡಲೇ ಶುಚಿಗೊಳಿಸಬೇಕು, ಸಮರ್ಪಕ ನೀರು ಪೂರೈಸಬೇಕು ಎಂದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
ಈದಿನ.ಕಾಮ್ ವಸತಿ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆ ಕುರಿತು ವಿಚಾರಿಸಿದಾಗ, “ಊಟದ ಕುರಿತು ವಾರ್ಡನ್ ಅಮಾನತ್ತಿಗಾಗಿ ನಾವು ಪ್ರತಿಭಟನೆ ಮಾಡಿಲ್ಲ. ಎರಡು ದಿನಗಳಿಂದ ನೀರಿನ ಸಮಸ್ಯೆ, ಬಾತ್‌ರೂಮ್ ಗಳು ಬ್ಲಾಕ್ ಆಗಿದ್ದು ಅವುಗಳನ್ನು ಸ್ವಚ್ಛಗೊಳ್ಳಿಸಬೇಕು ಎಂದು ಪ್ರತಿಭಟನೆ ಮಾಡಿದ್ದೇವೆ. ವಾರ್ಡನ್ ಗುರುಲಿಂಗಮ್ಮ ಅವರು ಟ್ಯಾಂಕರ್ ನೀರು ತರಿಸಿ ಹಾಕಿದ್ದಾರೆ. ಅವರನ್ನು ಅಮಾನತು ಮಾಡಿರುವುದು ತಪ್ಪು” ಎಂದು ತಿಳಿಸಿದ್ದಾರೆ.
“ಹಾಸ್ಟೆಲ್‌ನ ಬೋರ್‌ವೆಲ್ ಕೆಟ್ಟಿದ್ದು, ಅದನ್ನ ದುರಸ್ತಿ ಮಾಡಲು ಹತ್ತು ಸಾವಿರ ಒಳಗೆ ಯಾವುದೇ ಖರ್ಚು ಬಂದರೂ ನಾನೇ ದುರಸ್ತಿ ಮಾಡಿಸುವೆ. ಅದಕ್ಕಿಂತ ಮೇಲ್ಪಟ್ಟು ಖರ್ಚು ಬಂದರೆ ಮೇಲಧಿಕಾರಿಗಳು ಅನುಮತಿ ನೀಡಿ, ಅವರ ಒಪ್ಪಿಗೆ ಮೇರೆಗೆ ಮಾಡಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ ವಾರ್ಡನ್ ಅವರ ತಪ್ಪೇನಿಲ್ಲ. ಅವರು ವಿದ್ಯಾರ್ಥಿನಿಯರನ್ನು ತುಂಬಾ ಚೆನ್ನಾಗಿ ನೋಡಿಕ್ಕೊಳ್ಳುತ್ತಿದ್ದಾರೆ. ಆದರೆ ವಾಸ್ತವ ಸತ್ಯ ಅರಿಯದೆ, ಗುರುಲಿಂಗಮ್ಮ ಅವರ ವಿರುದ್ಧ ಪತ್ರಿಕೆಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟ ಮಾಡಲಾಗಿದೆ. ವಾಸ್ತವಾಂಶವನ್ನು ಅರಿಯದೇ ಅಧಿಕಾರಿಗಳು ವಾರ್ಡನ್ ಅವರನ್ನು ಅಮಾನತು ಮಾಡಿದ್ದಾರೆ. ಇದು ತಪ್ಪು. ಆದೇಶ ವಾಪಸ್ ಪಡೆಯಬೇಕು” ಎಂದು ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.
ಗುರುಲಿಂಗಮ್ಮ ಅವರ ಅಮಾನತು ಮಾಡಬಾರದು. ಅವರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಪತ್ರದ ಮೂಲಕ ವಿಚಾರ ತಿಳಿಸಿದ್ದೇವೆ. ಹಾಸ್ಟೆಲ್‌ನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆಯೂ ಅಧಿಕಾರಿಗಳಿಗೆ ಮನವಿಯಲ್ಲಿ ತಿಳಿಸಿದ್ದೇವೆ ಎಂದು ವಸತಿ ನಿಲಯದ ವಿದ್ಯಾರ್ಥಿನಿಯರು ಮಾಹಿತಿ ನೀಡಿದರು.
ವರದಿ: ಗೀತಾ ಹೊಸಮನಿ, ಕಲಬುರಗಿ
