ಸಂವಿಧಾನ ಇಲ್ಲ ಎಂದಾದರೆ ಎರಡು ಸಾವಿರ ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಮನುಸ್ಮೃತಿ ಪ್ರಕಾರ ನಾವು ನೀವು ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತೆ ಎಂದು ಜನವಾದಿ ಮಹಿಳಾ ಸಂಘಟನೆ ಡಾ ಮೀನಾಕ್ಷಿ ಬಾಳಿ ಹೇಳಿದರು.
ಕಲಬುರಗಿ ಜಿಲ್ಲೆಯ ಶಹಾಬಾದ್ ಪಟ್ಟಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಬಸವಣ್ಣ, ವಾಲ್ಮೀಕಿ, ಕನಕದಾಸ ಸಾವಿತ್ರಿ ಬಾಯಿ ಫುಲೆ ಸೇರಿದಂತೆ ಉಳಿದೆಲ್ಲ ನಾಯಕರ ಜಯಂತಿಗಳನ್ನು ಕರ್ನಾಟಕದಲ್ಲಿ ಮಾತ್ರ ಆಚರಣೆ ಮಾಡಿದರೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಇಡೀ ಭಾರತ ದೇಶಾದ್ಯಂತ ಆಚರಿಸಲಾಗುತ್ತದೆ” ಎಂದು ಹೇಳಿದರು.
“ಶೂದ್ರರು ಎಂದರೆ ದಲಿತರು, ಲಿಂಗಾಯತ, ಕುರುಬ, ಕಬ್ಬಲಿಗ ಅಲ್ಪಸಂಖ್ಯಾತರು ಸೇರಿದಂತೆ ಇತರ ಜಾತಿಗಳೂ ಒಳಗೊಂಡಿವೆ. ದುಡಿಯುವ ಜನ ಜಾತಿ, ಭೇದ, ಧರ್ಮ ಬಿಟ್ಟು ಎಲ್ಲರೂ ಒಂದಾಗಬೇಕು. ಆಗ ಮಾತ್ರ ಆಳುವ ಜನ ಹೆದರುತ್ತಾರೆ, ಸಂವಿಧಾನ ಉಳಿಯುತದೆ” ಎಂದು ಜನರಿಗೆ ಮನವರಿಕೆ ಮಾಡಿದರು.
“ಬಸವಣ್ಣ ಲಿಂಗಾಯತರ ನಾಯಕರು, ಕನಕದಾಸ ಕುರುಬರ ನಾಯಕ, ಅಂಬೇಡ್ಕರ್ ದಲಿತರ ನಾಯಕ ಎಂದು ಹೇಳಿ ಸಮಾಜವನ್ನು ಛಿದ್ರ ಛಿದ್ರವಾಗಿ ಒಡೆಯುವ ಹುನ್ನಾರು ನಡೆಯುತ್ತಿದೆ.
ಸಂವಿಧಾನ ಇರುವ ಕಾರಣಕ್ಕೆ ನಾವು ನೀವೆಲ್ಲ ಮಾತನಾಡಲು ಸಾಧ್ಯವಾಗಿದೆ. ಉಡಲು ಬಟ್ಟೆ ಕೊಟ್ಟಿದೆ, ತಮ್ಮಿಚ್ಚೆಯಂತಹ ಆಹಾರ ಸೇವಿಸುವ ಹಕ್ಕು ಕೊಟ್ಟಿದೆ” ಎಂದು ಹೇಳಿದರು.
“ಇಡೀ ದೇಶದ ಹೆಣ್ಣುಮಕ್ಕಳು ಮುಂಜಾನೆ ಎದ್ದು ಅಂಬೇಡ್ಕರ್ ಅವರನ್ನು ನೆನೆಯಬೇಕು. ಕಾರಣ ಹೆಣ್ಣುಮಕ್ಕಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಪಿತ್ರಾರ್ಜಿತ ಅಸ್ತಿಯಲ್ಲಿ ಹಕ್ಕು, ಮಕ್ಕಳನ್ನು ದತ್ತು ಪಡೆಯುವ ಹಕ್ಕು, ಮಹಿಳೆಯರಿಗೆ ವಿಚ್ಛೇದನ ಪಡೆಯುವ ಹಕ್ಕು ಕೊಡಬೇಕೆಂದು ಇಟ್ಟ ಬೇಡಿಕೆ ಫಲಿಸದಿದ್ದಾಗ ಮಹಿಳೆಯರಿಗಾಗಿ ಮಂತ್ರಿಗಿರಿ ತ್ಯಾಗ ಮಾಡಿದ ಏಕೈಕ ಮಹಾನ್ ವ್ಯಕ್ತಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ಎಂದು ಸ್ಮರಿಸಿದರು.
“ಬರಗಾಲ ಘೋಷಣೆ ಆಗಿದ್ದರೂ ಬಡವರು, ಕೂಲಿ ಕಾರ್ಮಿಕರು, ರೈತರು ಕಂಗಾಲಾಗಿದ್ದಾರೆ. ಕೆಲಸ ಸಿಗುತ್ತಿಲ್ಲ, ಉದ್ಯೋಗ ಖಾತ್ರಿ ಅಡಿಯಲ್ಲಿಯೂ ಕೆಲಸ ಕೊಡುತ್ತಿಲ್ಲ. ಅಚ್ಛೇ ದಿನ್, ಅಚ್ಛೇ ದಿನ್ ಎನ್ನುತ್ತಲೇ ಜನರ ಬದುಕು ಮುರಾಬಟ್ಟಿಯಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರ ಶಿಕ್ಷಣವನ್ನು ಖಾಸಗಿಕರಣ ಮಾಡಿ, ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದ್ದಾರೆ. ಅಂಬೇಡ್ಕರ್ ಅವರು ಅಂದೇ, ʼಎಲ್ಲಿವರೆಗೆ ನನ್ನ ಜನ ಶಿಕ್ಷಣ ಕಲಿಯೋದಿಲ್ಲವೋ, ಅಲ್ಲಿಯವರೆಗೆ ಸಂವಿಧಾನದ ಮಹತ್ವ ಗೊತ್ತಾಗುವುದಿಲ್ಲ. ನನ್ನ ಜನ ಶಿಕ್ಷತರಾಗಬೇಕು” ಎಂದು ಹಂಬಲಿಸಿದ್ದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನೀರು ಪೂರೈಕೆಗೆ ಮೀನಾಮೇಷ; ಅತ್ತನೂರು ಗ್ರಾ. ಪಂಚಾಯಿತಿಗೆ ಮಹಿಳೆಯರಿಂದ ಮುತ್ತಿಗೆ
“ದೇಶದಲ್ಲಿ ಒಟ್ಟು 43ಕ್ಕೂ ಹೆಚ್ಚು ಮೀಸಲಾತಿ ಇದೆ. ಶಿಕ್ಷಣದಲ್ಲಿ ಅತಿ ಹೆಚ್ಚು ಮೀಸಲಾತಿ ಇದೆ. ಖಾಸಗಿ ಶಾಲೆಯಲ್ಲಿ ಮೀಸಲಾತಿ ಇಲ್ಲ. ಸಂವಿಧಾನ ತೋರಿಕೆಯ ಗ್ರಂಥವಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಶಿಕ್ಷಣಕ್ಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ, ಅವಶ್ಯಕತೆ ಇರುವಷ್ಟು ವಸತಿ ನಿಲಯಗಳನ್ನು ನಿರ್ಮಾಣ ಮಾಡುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
