ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಬಿಎಸ್‌ಪಿ(ಬಹುಜನ ಸಮಾಜ ಪಕ್ಷ) ಕಲಬುರಗಿ ಜಿಲ್ಲೆಯ ಜೇವರ್ಗಿ ಘಟಕದಿಂದ ತಹಶೀಲ್ದಾರ್ ಹಾಗೂ ದಂಡಾಧಿಕಾರಿ ಹಾಗೂ ಅಬಕಾರಿ ನಿರೀಕ್ಷಕರು ವಲಯ ಜೇವರ್ಗಿರವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ತಾಲೂಕು ಸಂಯೋಜಕ ಪರಶುರಾಮ್ ನಡೆಗಟ್ಟಿ ಮಾತನಾಡಿ, “ಹಳ್ಳಿಗಳಲ್ಲಿ ದಿನದ 24 ಗಂಟೆಗಳ ಕಾಲ ಮದ್ಯ ದೊರೆಯುತ್ತಿದೆ. ಹಾಗಾಗಿ ಅಲ್ಲಿನ ಕೆಲ ಜನರು, ಕಾರ್ಮಿಕರು ಬೆಳಿಗ್ಗೆ 6ರಿಂದ ರಾತ್ರಿಯವರೆಗೂ ಕುಡಿದುಕೊಂಡು ಕೆಲಸಕ್ಕೂ ಹೋಗದೆ ನಶೆಯಲ್ಲಿ ತೇಲಾಡುತ್ತ ಕುಡಿಯಲು ಸಾಲ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸುಮಾರು ಕುಟುಂಬಗಳು ಬೀದಿಪಾಲಾಗುತ್ತಿವೆ. ಕೌಟುಂಬಿಕ ಹಾಗೂ ಸಾಮಾಜಿಕ ಕಲಹಗಳು ಹೆಚ್ಚಾಗಿ ಅಶಾಂತಿ ಮೂಡುತ್ತಿದೆ. ಸಣ್ಣಪುಟ್ಟ ಮಕ್ಕಳು ಹಾಗೂ ವಿದ್ಯಾರ್ಥಿಗಳ ಮೇಲೆ ತುಂಬಾ ಪ್ರಭಾವ ಬೀರಿ ದಾರಿ ತಪ್ಪುವಂತಾಗುತ್ತಿದೆ. ಸಮಾಜದಲ್ಲಿ ಪುಜ್ಞಾವಂತರು ಎನಿಸಿಕೊಂಡಿರುವ ನಾವೆಲ್ಲರೂ ಇದನ್ನು ಗಮನಹರಿಸದಿರುವುದು ನಿಜವಾಗಿಯೂ ದುರಂತ” ಎಂದು ಬೇಸರ ವ್ಯಕ್ತಪಡಿಸಿದರು.
“ವೈನ್ ಶಾಪ್ ಮತ್ತು ಬಾರ್‌ಗಳ ಮಾಲೀಕರು ತರಕಾರಿ ಮಾರುವಂತೆ ಪ್ರತಿ ಹಳ್ಳಿಗಳ ಅಂಗಡಿ ಮತ್ತು ಹೋಟೆಲ್‌ಗಳಿಗೆ ರಾಜಾರೋಷವಾಗಿ ಸರಬರಾಜು ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಮದ್ಯ ಮಾರಾಟ ತೊಡಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಮೌನವಹಿಸಿ ಏನೂ ಗೊತ್ತಿಲ್ಲದಂತಿದ್ದಾರೆ. ಈ ಅವ್ಯವಹಾರಕ್ಕೆ ಅಬಕಾರಿ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ” ಎಂದು ದೂರಿದರು.
ಬಹುಜನ ಸಮಾಜ ಪಕ್ಷ ಉಪಾಧ್ಯಕ್ಷ ತಿಪ್ಪಣ್ಣ ಎಂ ಕಿನೋರ ಮಾತನಾಡಿ, “ಜೇವರ್ಗಿ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಮತ್ತು ನಗರದ ವಾರ್ಡ್‌ಗಳಲ್ಲಿ ವೈನ್‌ಶಾಪ್ ಮತ್ತು ಬಾರ್‌ಗಳಿಂದ ಮದ್ಯ ಖರೀದಿಸಿ ಹಳ್ಳಿ ಮತ್ತು ವಾರ್ಡ್‌ಗಳ ಕಿರಾಣಿ ಅಂಗಡಿ, ಪಾನ್ ಶಾಪ್, ಚಹಾದಂಗಡಿ ಸೇರಿದಂತೆ ಇನ್ನೂ ಕೆಲವರು ಮನೆಯಲ್ಲಿಯೇ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹಳ್ಳಿಗಳಿಗೆ ಮತ್ತು ನಗರದ ವಾರ್ಡ್‌ಗಳಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿರುವ ವೈನ್‌ಶಾಪ್ ಮತ್ತು ಬಾರ್ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಪರವಾನಗಿ ರದ್ದು ಮಾಡಬೇಕು. ವೈನ್ ಶಾಪ್ ಮತ್ತು ಬಾರ್‌ಗಳಲ್ಲಿ ಮದ್ಯ ಖರೀದಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಸಾಥ್ ನೀಡುತ್ತಿರುವ ಅಬಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಕ್ಫ್ ಮಂಡಳಿಯಿಂದ ಆಗುತ್ತಿರುವ ಅನ್ಯಾಯ ಸರಿಡಿಸಲು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ
“ಕೆಲವು ವೈನ್‌ಶಾಪ್‌ಗಳು ಮತ್ತು ಬಾರ್‌ಗಳು, ಶಾಲೆ, ದೇವಸ್ಥಾನ, ಮಹಾಪುರುಷರ ಪುತ್ಥಳಿ ಹತ್ತಿರವೇ ನಿರ್ಮಾಣವಾಗಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇಂತಹ ವೈನ್‌ಶಾಪ್ ಮತ್ತು ಬಾರ್‌ಗಳನ್ನು ಪರಿಶೀಲಿಸಿ ಸ್ಥಳಾಂತರಿಸಬೇಕು. ಪ್ರತಿ ಹಳ್ಳಿಗೆ ಪೊಲೀಸ್ ಇಲಾಖೆಯಿಂದ ಒಬ್ಬರನ್ನು ಪೊಲೀಸ್ ಬೀಟ್ ಎಂದು ನೇಮಕ ಮಾಡಿ ಬೇರೆ ಬೇರೆ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು ನೇಮಕ ಮಾಡಿದ್ದು, ಅವರೂ ಕೂಡ ಈ ಅಕ್ರಮ ಮದ್ಯ ಮಾರಾಟದ ತಪಾಸಣೆ ನಡೆಸಿ ಮದ್ಯ ಮಾರಾಟ ನಿಲ್ಲಿಸುವಂತೆ ಸೂಚಿಸಬೇಕು” ಎಂದರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಧರ್ಮರಾಯ ಎಸ್ ಎಲಿಮನಿ, ಪಾಟೀಲ್ ರಾಸಣಗಿ, ಶರಣು ಪೂಜಾರಿ, ಹುಸೇನಿ ರಾಸಣಗಿ, ಹಣಮಂತ ಬೋವಿ, ಸಂಗನಗೌಡ ಅಂಗಡಿ, ದೇವೀಂದ್ರ ಬಣಮಿಗಿ, ಕೃಷ್ಣ ಅಡವಿ ಸೇರಿದಂತೆ ಇತರರು ಇದ್ದರು.