ಕಳಪೆ ಮಟ್ಟದ ಸಾರಸ್ 335 ಸೋಯಾ ಕಳಪೆ ಮಟ್ಟದ ಬೀಜ ಮಾರಾಟ ಮಾಡಿದ ಮಹಾಗಾಂವ ರೈತ ಸಂಪರ್ಕ ಕೇಂದ್ರದಿಂದ ಒಟ್ಟು 1,000 ಪಾಕೆಟ್ ಬೀಜ ವಿತರಿಸಿ ರೈತರಿಗೆ ಮೋಸ ಮಾಡಿದ ಬೀಜದ ಕಂಪನಿ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಮಾತನಾಡಿ, “ಕಲಬುರಗಿ ಜಿಲ್ಲೆಯ ರೈತರ ಜಿವನಾಡಿ ಬೆಳೆ ಸೋಯಾ ಬೆಳೆಯಾಗಿದೆ. ಆದರೆ, ಮಹಾಗಾಂವ ರೈತ ಸಂಪರ್ಕ ಕೇಂದ್ರದಿಂದ ವಿತರಿಸಿದ ಸಾರಸ್ 335 ಸೋಯಾ ಬೀಜ ಅತ್ಯಂತ ಕಳಪೆ ಮಟ್ಟದಿಂದ ಕೂಡಿದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗಿದೆ. ಬೀಜದ ಕಂಪನಿ ಮೂಲಕ ಪ್ರತಿ ಎಕರೆಗೆ ಕನಿಷ್ಠ 25,000 ರೂಪಾಯಿ ಪರಿಹಾರ ವಿತರಿಸಬೇಕುʼ ಎಂದು ಆಗ್ರಹಿಸಿದರು.
ರೈತರು ಪ್ರತಿ ಎಕರೆಗೆ ಕನಿಷ್ಠ 6 ರಿಂದ 8 ಸಾವಿರ ರೂಪಾಯಿ ಖರ್ಚು ಆಗುತ್ತಿದೆ. ಕಳಪೆ ಬೀಜ ವಿತರಿಸಿದ ಕಂಪನಿಯಿಂದ ರೈತರಿಗೆ ಕನಿಷ್ಠ ಒಂದು ಎಕರೆಗೆ 35,000 ರೂಪಾಯಿ ಹಾನಿಯುಂಟಾಗಿದೆ. ರೈತರ ಬದುಕಿಗೆ ಬರೆ ಎಳೆದ ಸಾರಸ್ 335 ಸೋಯಾ ಬೀಜದ ಕಂಪನಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಂಪನಿ ಪರವಾನಿಗೆ ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ನಿರ್ಲಕ್ಷ್ಯ ಧೋರಣೆ ತೊರಿದ್ದಲ್ಲಿ ಮೊಸಕ್ಕೊಳಗಾದ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಕಲಬುರಗಿ | ಅನುದಾನ ಲೂಟಿ ಆರೋಪ : ಹಾಗರಗಾ ಪಿಡಿಒ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ
ಪ್ರತಿಭಟನೆಯಲ್ಲಿ ಪ್ರಮುಖರಾದ ಶ್ರೀನಿವಾಸ ಎಸ್.ಕೆಂಚೆ, ಶಿವಕುಮಾರ ಹೆರೂರು, ರೇವಣಸಿದ್ದಪ್ಪಾ ಅಪಚಂದ, ಮನೋಹರ್ ಗುರುಡೆ, ಮಲ್ಲಿಕಾರ್ಜುನ ಮಿಸೆ, ಬಸವರಾಜ ಹೊಳಕುಂದಿ, ಬಾಬುರಾವ, ವಿದ್ಯಾವತಿ, ಚಂದಮ್ಮ ಬುರುಡೆ, ಗಂಗಮ್ಮಾ ಜಿವುಣಗಿ, ಅನಿತಾ ಹರೆಕುರುಬುರು, ಸುರುತ ಹತ್ತರ್ಕಿ ಸೇರಿದಂತೆ ಮತ್ತಿತರರು ಇದ್ದರು.