ಕಲಬುರಗಿಯ ಜಿಮ್ಸ್ ಆವರಣದ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದಿಂದ ನವಜಾತ ಶಿಶುವನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ಮೂವರು ಮಹಿಳೆಯರನ್ನು ಬಂಧಿಸಿದ್ದು, ಮಗುವನ್ನು ಸುರಕ್ಷಿತವಾಗಿ ತಾಯಿ ಮಡಿಲಿಗೆ ಒಪ್ಪಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ ತಿಳಿಸಿದರು.
ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದ ಕಸ್ತೂರಿ ರಾಮಕೃಷ್ಣ ದಂಪತಿಗೆ ಸೇರಿದ ಮಗುವನ್ನು ನ.25ರಂದು ಜಿಮ್ಸ್ ಆಸ್ಪತ್ರೆಯಿಂದ ಅಪಹರಿಸಿದ್ದರು. ಕಲಬುರಗಿಯ ಎಂಎಸ್‌ಕೆ ಮಿಲ್ ಸಮೀಪದ ಬಡಾವಣೆಯ ನಿವಾಸಿಗಳಾದ ಉಮೇರಾ ಆವೇಜ್ ಶೇಖ್ (30), ನಸ್ರೀನ್ ಬಾನು ಅಬ್ದುಲ್ ರಹೀಂ ಶೇಖ್ (32) ಹಾಗೂ ಫಾತಿಮಾ ಫಯಾಜ್ ಶೇಖ್ (35) ಬಂಧಿತ ಆರೋಪಿಗಳು. ಈ ಮೂವರು ನರ್ಸ್ ಸೋಗಿನಲ್ಲಿ ಆಸ್ಪತ್ರೆಗೆ ಬಂದು ಮಗುವನ್ನು ಅಪಹರಿಸಿದ್ದರು.
ಆರೋಪಿಗಳ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಲಾಗಿತ್ತು. ಕಳೆದ ಎರಡು ದಿನಗಳ ಸತತ ಶೋಧ ಕಾರ್ಯಾಚರಣೆ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಮಾಹಿತಿ ನೀಡಿದರು.
ಕಲಬುರಗಿಯ ಜಿಮ್ಸ್ ಆವರಣದ ತಾಯಿ-ಮಕ್ಕಳ ವಿಭಾಗದಿಂದ ಮೂವರು ನರ್ಸ್ ಸೋಗಿನಲ್ಲಿ ಆಸ್ಪತ್ರೆಗೆ ಬಂದು ಮಗುವನ್ನು ಅಪಹರಿಸಿದ್ದರು. ಈ ಪ್ರಕರಣವನ್ನು ಬೇಧಿಸಿರುವ @KlbCityPolice ಕಮಿಷನರ್ ಶರಣಪ್ಪ ಎಸ್.ಡಿ ನೇತೃತ್ವದ ತಂಡ ಸತತ ಶೋಧ ಕಾರ್ಯಾಚರಣೆ ಬಳಿಕ ಮಗುವನ್ನು ಪತ್ತೆ ಹಚ್ಚುವಲ್ಲಿ ಸಫಲವಾಗಿದೆ. ಮಗುವನ್ನು ಮತ್ತೆ ತಾಯಿಯ ಮಡಿಲಲ್ಲಿಟ್ಟಾಗ.. pic.twitter.com/BkRga4tN53
— eedina.com ಈ ದಿನ.ಕಾಮ್ (@eedinanews) November 28, 2024
ಮಗುವನ್ನು ಕದ್ದು ಪರಾರಿಯಾಗುತ್ತಿದ್ದ ವೇಳೆ ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದ್ದ ದೃಶ್ಯಾವಳಿ ಆಧರಿಸಿ ಆರೋಪಿಗಳ ಬೆನ್ನು ಹತ್ತಿದ ಪೊಲೀಸರು, ಕೊನೆಗೂ ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ. ಈ ಘಟನೆ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್ ಹಾಗೂ ಪ್ರವೀಣ ನಾಯಕ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು ಎಂದು ವಿವರಿಸಿದರು.
ಆರೋಪಿಗಳು ಮಗುವನ್ನು 50 ಸಾವಿರಕ್ಕೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಈ ಕುರಿತು ಅವರು ಮುಂಗಡವಾಗಿ 25 ಸಾವಿರ ಹಣ ಕೂಡ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ. ಓರ್ವ ಮಹಿಳೆಗೆ 7 ವರ್ಷದಿಂದ ಮಗು ಆಗಿರುವುದಿಲ್ಲ, ಆಕೆಗೆ ಮಾರಾಟ ಮಾಡಲು ಈ ಮಗುವನ್ನು ಅಪಹರಿಸಲಾಗಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಬಿಹಾರ ಬೋಧ್ ಗಯಾದ ಸಂಪೂರ್ಣ ಆಡಳಿತ ಬೌದ್ಧರಿಗೆ ನೀಡಬೇಕು: ಡಾ. ಭಗವಂತ ಅನ್ವಾರ
ಮಗುವಿನ ಅಪಹರಣದ ಮಾಹಿತಿ ಲಭಿಸುತ್ತಿದ್ದಂತೆಯೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಆದಷ್ಟು ಶೀಘ್ರ ಅಪಹೃತ ಮಗುವನ್ನು ಪತ್ತೆ ಮಾಡಿ ಸುರಕ್ಷಿತವಾಗಿ ತಾಯಿಯ ಮಡಿಲಿಗೆ ಸೇರಿಸುವ ವಾಗ್ದಾನ ಮಾಡಿದ್ದರು. ಮೇಲಾಗಿ, ಘಟನೆಗೆ ಸಂಬಂಧಿಸಿದಂತೆ ಶೋಧ ಕಾರ್ಯ ಚುರುಕುಗೊಳಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದರು.
ತಾಯಿಯ ಮಡಿಲು ಸೇರಿದ ಮಗು.
— Kalaburagi City Police (@KlbCityPolice) November 27, 2024
ಕಲಬುರಗಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿದ ಘಟನೆಗೆ ಸಂಬಂಧಿಸಿದಂತೆ ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್ ಡಿ., ಐಪಿಎಸ್ ರವರ ಮಾರ್ಗದರ್ಶನದಲ್ಲಿ 24 ಗಂಟೆಗಳಲ್ಲಿ ತ್ವರಿತ ಕಾರ್ಯಚರಣೆ ಕೈಗೊಂಡು ಮಗುವನ್ನು ಸಂರಕ್ಷಿಸಿ ಪಾಲಕರಿಗೆ ಒಪ್ಪಿಸಲಾಯಿತು. @DgpKarnataka pic.twitter.com/n9TqqCUunJ