ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ರೈತರ ಜಮೀನಿನಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದ ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಅಲೆಯುವಂತಾಗಿದ್ದು, ಕಾರ್ಮಿಕರು ಪುನಃ ಮಹಾನಗರಗಳಿಗೆ ಕೆಲಸ ಅರಸಿ ಗುಳೆ ಹೋಗುವಂತಹ ಪರಿಸ್ಥಿತಿ ಉದ್ಭವಾಗಿದೆ. ಆದ್ದರಿಂದ ಕಲಬುರಗಿ ಜಿಲ್ಲೆ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಬರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯೂಯು) ಕಾರ್ಯಕರ್ತರು ಕಲಬುರಗಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ ಪ್ರತಿಭಟಿಸಿದರು.
“ರೈತರ ಸಾಲ ಮನ್ನಾ ಮಾಡಬೇಕು. ₹600ಕ್ಕೆ ಕೂಲಿ ಹೆಚ್ಚಳ ಮಾಡಬೇಕು. ಮನರೇಗಾ ಯೋಜನೆಯಡಿ ಬರಗಾಲ ಕಾಮಗಾರಿ ಆರಂಭಿಸಬೇಕು. ಮನರೇಗಾ ಅಡಿ ಕೆಲಸವನ್ನು 200 ಮಾನವ ದಿನಗಳಿಗೆ ಹೆಚ್ಚಿಸಬೇಕು. ಕೆಲಸ ಹೆಚ್ಚಳ ಮಾಡಬೇಕು” ಆಗ್ರಹಿಸಿದರು.
“ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಡಿಯೊ ನೇಮಕಾತಿ ಮಾಡಬೇಕು. ತಪ್ಪಿತಸ್ಥರಿಗೆ ಶಿಸ್ತಿನ ಕ್ರಮ ಜರುಗಿಸುವ ಅಧಿಕಾರ ಜಿಲ್ಲಾ ಪಂಚಾಯಿತಿಗೆ ಕೊಡಬೇಕು. ತೋಟಗಾರಿಕೆ ಇಲಾಖೆ ಮನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಮನರೇಗಾ ಯೋಜನೆ ಅಡಿಯಲ್ಲಿ ಅರಣ್ಯ ಕಾಮಗಾರಿ ಪ್ರಾರಂಭಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಸಂತೆ ಮೈದಾನದಲ್ಲಿ ನಿಂತಿರುವ ಕೊಳಚೆ ನೀರು; ಸ್ಥಳೀಯರ ಆಕ್ರೋಶ
ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಅಭಿವೃದ್ಧಿ ಅಧಿಕಾರಿಗಳು ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಭಿಮಶೆಟ್ಟಿ ಯಂಪಳಿ, ಸಾಯಿಬಣ್ಣ ಗುಡುಬಾ, ಮಲ್ಲಮ್ಮ ಮಗಿ, ದಿಲೀಪ್ ಕುಮಾರ್ ನಾಗೂರೆ, ರಾಯಪ್ಪ ಹುರಮುಂಜಿ ಜಾವೇದ್ ಹುಸೈನ್ ಸುಭಾಷ್ ಹೊಸಮನಿ, ಸಿದ್ದು ಹರವಾಳ, ಕಾಶಿನಾಥ್ ಬಂಡಿ, ಗುರು ಕೋಣಿನ, ಹನಿಫಾ ಬೇಗಂ ಕೋಡದುರು, ಜಾಫರ್ ಇದ್ದರು.