ಪ್ರಸ್ತುತ ವರ್ಷ ಮುಂಗಾರು ಮಳೆ ವಿಳಂಬದಿಂದ ರೈತರ ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟ ಪರಿಹಾರ ಹಾಗೂ ಕಾಮಗಾರಿ ಉದ್ಯೋಗ ನೀಡಬೇಕು ಎಂದು ಆಲ್ ಇಂಡಿಯಾ ರೈತ ಕೃಷಿ ಕಾರ್ಮಿಕ ಸಂಘಟನೆ ಯಾದಗಿರಿ ಜಿಲ್ಲಾ ಸಮಿತಿ ಮನವಿ ಮಾಡಿದೆ.
ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಕಾರ್ಯಕರ್ತರು ಯಾದಗಿರಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ನಡೆಸಿದರು.
“ಮುಂಗಾರು ಅಭಾವದ ಹಿನ್ನೆಲೆಯಲ್ಲಿ ಬೆಳಹಾನಿ ಆಗಿರುವುದರಿಂದ ರೈತರಿಗೆ ಕೂಡಲೇ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡಬೇಕು. ರೈತರ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು. ಮನರೇಗಾ ಯೋಜನೆಯಡಿ ವರ್ಷಪೂರ್ತಿ ಉದ್ಯೋಗ ನೀಡಬೇಕು. ಬಾಕಿ ಉಳಿದಿರುವ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕುಮಾರಸ್ವಾಮಿ ಆರೋಪಗಳು ಹಿಟ್ ಅಂಡ್ ರನ್ ಇದ್ದಂತೆ: ಸಿಎಂ ಸಿದ್ದರಾಮಯ್ಯ
“ಸರ್ಕಾರದ ದುಂದು ವೆಚ್ಚಗಳನ್ನು ಕಡಿತಗೊಳಿಸಿ, ರೈತರಿಗೆ ಬಿತ್ತನೆಗೆ ಬೀಜ, ರಸಗೊಬ್ಬರ ಇತ್ಯಾದಿಗಳನ್ನು ಉಚಿತವಾಗಿ ವಿತರಿಸಬೇಕು. ನಿಗದಿತ ಪೂರ್ಣ ಪ್ರಮಾಣದ ಮಳೆಯಾಗದೇ ಬರ ಪರಿಸ್ಥಿತಿ ಎದುರಾದರೆ ಅದನ್ನು ಸಮರ್ಥವಾಗಿ ಎದುರಿಸಲು ಪೂರ್ವ ಯೋಜನೆ ಮಾಡಿಕೊಂಡು, ಆಡಳಿತವನ್ನು ಸನ್ನದ್ದ ರೀತಿಯಲ್ಲಿ ಇಡಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಭೀಮರಡ್ಡಿ, ಜಿಲ್ಲಾ ಉಪಾಧ್ಯಕ್ಷ ಜಮಾಲ್ ಸಾಬ್, ತಾಲೂಕು ಕಾರ್ಯದರ್ಶಿ ಸುಭಾಷ್ ಚಂದ್ರ ಬಾವನೋರ ಹಾಗೂ ರೈತ ಮಹಿಳೆಯರು ಮತ್ತು ನೂರಾರು ರೈತರು ಇದ್ದರು.