ಗಂಡೂರಿ ನಾಲಾ ಎಡದಂಡೆ ಬಲದಂಡೆ ಕಾಲುವೆ ಹೂಳು ತೆಗೆದು ಅನಗತ್ಯ ಗಿಡಗಂಟಿಗಳನ್ನು ತೆರವುಗೊಳಿಸಿ ಕಾಲುವೆ ಕೆಳಗಿನ ರೈತರ ಬೆಳೆನಷ್ಟವಾಗದಂತೆ ನೋಡಿಕೊಳ್ಳಬೇಕು ಮತ್ತು ಭೂಮಿ ತೇವಾಂಶ ಒಣಗಿ ಹೋಗಿದ್ದು, ಕೂಡಲೇ ರೈತರ ಬೆಳೆಗಳಿಗೆ ನೀರು ಬಿಡಬೇಕೆಂದು ಆಗ್ರಹಿಸಿ ಕಲಬುರಗಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್)ದಿಂದ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕರ್ನಾಟಕ ನೀರಾವರಿ ನಿಗಮ ನಿಯಮಿತ ಗಂಡೂರಿ ನಾಲಾ ಉಪವಿಭಾಗ ಮಹಾಗಾಂವ ಮುಖ್ಯ ಎಂಜಿನಿಯರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಮಾತನಾಡಿ, “ಗಂಡೂರಿ ನಾಲಾ ನೀರಾವರಿ ಎಡದಂಡೆ ಮತ್ತು ಬಲದಂಡೆ ಕಾಲುವೆಗಳು ಹೂಳು ತುಂಬಿ ಹೋಗಿವೆ. ಕಾಲುವೆಗಳು ಒಡೆದು ಹಾಳಾಗಿ ಹೋಗಿವೆ. ಹೀಗಾಗಿ ಕ್ಯಾನಲ್ ಕಾಲುವೆಗಳಿಗೆ ನೀರು ಬಿಟ್ಟರೂ ಕೂಡಾ ಅಲ್ಲಲ್ಲಿ ನೀರು ಸೊರಿಕೆಯಾಗಿ ರೈತರ ಜಮೀನು ಹಾಗೂ ಬೆಳೆಗಳಿಗೆ ಬಂದು ತಲುಪುವುದಿಲ್ಲ. ಹೆಸರಿಗೆ ಮಾತ್ರ ನೀರು ಬಿಟ್ಟಂತಾಗುತ್ತದೆ. ಆದರೆ ಬೆಳೆಗಳಿಗೆ ನೀರು ಬರುವುದೇ ಇಲ್ಲ. ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಾಲುವೆ ತುಂಬಿದ ಹೂಳು ತೆಗೆದು ಕಾಲುವೆಗಳ ಮೂಲಕ ರೈತರ ಬೆಳೆಗಳಿಗೆ ಗಂಡೂರಿ ನಾಲಾ ನೀರಾವರಿ ತುರ್ತಾಗಿ ನೀರು ಬಿಡಬೇಕು” ಎಂದು ಆಗ್ರಹಿಸಿದರು.
ಜಂಟಿ ಕಾರ್ಯದರ್ಶಿ ಕೆಪಿಆರ್‌ಎಸ್ ದಿಲೀಪ್ ನಾಗೂರೆ, ಉಪಾಧ್ಯಕ್ಷ ಸಿದ್ದಪ್ಪಾ ಕಲಶೆಟ್ಟಿ, ಬಸವರಾಜ ಹೊಸಮನಿ, ಚಾಂದಪಾಷ ಕೆಳಗಿನಮನಿ, ಸುನಿಲ್ ಗುತ್ತೇದಾರ್, ಖಾದರಸಾಬ್ ಕೆಳಗಿನಮನಿ, ಮಲ್ಲಪ್ಪ ಪೂಜಾರಿ, ಇಸ್ಮಾಯಿಲ್ ರಟಗಲ್, ರೈತ ಮುಖಂಡ ಹಣಮಂತ ಚಂದ್ರನಗರ ಸೇರಿದಂತೆ ಇತರರು ಇದ್ದರು.
“ಬೆಣ್ಣೆ ತೊರಾ ಮುಳುಗಡೆ ಪ್ರದೇಶ ನಾಗೂರ ಗ್ರಾಮದ ಪುನರ್ವಸತಿ ಕೇಂದ್ರ 2ರಲ್ಲಿ ಹಕ್ಕುಪತ್ರ ಕೊಡುವಲ್ಲಿ ವಿಳಂಬನೀತಿ ಅನುಸರಿಸುತ್ತಿರುವುದು ಬಡವರ ವಿರೋಧಿಯಾಗಿದೆ. ಕೆಲವರಿಗೆ ಹಕ್ಕುಪತ್ರ ಕೊಟ್ಟರೂ ಜಾಗದ ಪ್ಲಾಟ್ ಸಂಖೆ ನೀರಾವರಿ ಇಲಾಖೆಯವರು ತೋರಿಸುತ್ತಿಲ್ಲ. ಇನ್ನೂ 200 ಮಂದಿ ನಿರಾಶ್ರಿತರಿಗೆ ಹಕ್ಕುಪತ್ರ ಕೊಟ್ಟಿಲ್ಲ ನಾಗೂರ ಪುನರ್ವಸತಿ ಕೇಂದ್ರ ನಿರಾಶ್ರಿತರಿಗೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಿದಂತಾಗಿದ್ದು, ಧೋರಣೆ ನಡೆಯುತ್ತಿದೆ. ಕೂಡಲೇ ಎಲ್ಲರಿಗೂ ಸಮಾನವಾಗಿ ಹಕ್ಕುಪತ್ರ ಕೊಡಬೇಕು. ಈಗಾಗಲೇ ಶೆಡ್ಡಿನಲ್ಲಿ ವಾಸಿಸುವ ನಿರಾಶ್ರಿತರ ಬದುಕು ಅಧೋಗತಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ನ.9ರಂದು ಹಿ ಚಿ ಹಬ್ಬ; ನೆಲಮೂಲ ಸಂಸ್ಕೃತಿಯ ಪ್ರತಿಭೆಗಳಿಗೆ ಜನಪದ ರಾಜ್ಯೋತ್ಸವ ಪ್ರಶಸ್ತಿ
“ರೈತರ ಹೊಲದಲ್ಲಿ ಕೆಲಸ ಮಾಡಿ ಕೃಷಿ ಕೂಲಿಕಾರರು ಕೆಲಸ ಮಾಡಿಬಂದು ರಾತ್ರಿ ವೇಳೆ ನಿದ್ರೆಗೆ ಜಾರಿದ ಸಮಯದಲ್ಲಿ ವಿಷಕಾರಿ ಹುಳಗಳ ಉಪಟಳ ಹೆಚ್ಚಾಗಿದ್ದು, ಸಣ್ಣಮಕ್ಕಳು, ದನಕರುಗಳು, ಕುರಿ, ಕೋಳಿಗಳು ಮತ್ತು ಮನುಷ್ಯರ ಜೀವಕ್ಕೆ ಅಪಾಯವಿರುವುದು ಎದ್ದುಕಾಣುತ್ತದೆ. ಜನರು ಭಾರೀ ಭಯಭೀತರಾಗಿದ್ದಾರೆ. ಮುಳ್ಳು, ಗಿಡಗಂಟಿಗಳು ಬೆಳೆದಿವೆ. ಹಾಗಾಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿ ತೋರದೆ ಅಲ್ಲಿನ ಸಾರ್ವಜನಿಕರ ಮಾನವೀಯತೆ ಹಿತದೃಷ್ಠಿಯಿಂದ ಕೂಡಲೇ ಸ್ವಚ್ಛಗೊಳಿಸಬೇಕು” ಎಂದು ಒತ್ತಾಯಿಸಿದರು.