ಕಲಬುರಗಿ ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ನದಿ, ಹಳ್ಳ-ಕೊಳ್ಳಗಳು ತುಂಬು ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಉಂಟಾಗಿದೆ. ಸರ್ಕಾರವು ಬೆಳೆ ಹಾನಿಗೆ ಪರಿಹಾರ ಕೊಡಬೇಕು, ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರು ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದ್ದಾರೆ.
“ಮಿಶ್ರ ಬೆಳೆಯಾಗಿ ಇರುವ ತೊಗರಿ ಒಳಗಡೆ ಇರುವ ಹೆಸರು ಕನಿಷ್ಠ ಶೇ 30% ಹೆಸರು ಗಿಡದಲ್ಲಿ ಮೊಳಕೆ ಒಡೆಯುತ್ತಿದ್ದು ಸಂಪೂರ್ಣ ಹಾಳಾಗಿವೆ. ಮೂರು ತಿಂಗಳ ಬೆಳೆಯಾದ ಸೋಯಾಬಿನ್, ಆರವತ್ತು ದಿನದ ಬೆಳೆಯಾದ ಹೆಸರು, ಉದ್ದು, ರೈತರ ಜೀವನಾಡಿ ಬೆಳೆಗಳಾಗಿವೆ” ಎಂದು ತಿಳಿಸಿದರು.
“ಉದ್ದಿನ ಬೆಳೆ ಕಟಾವುಗೆ ಬಂದಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಟಾವು ಮಾಡಲು ಸಾಧ್ಯವಾಗಿಲ್ಲ. ಕಟಾವು ಮಾಡಿ ಮಾರಾಟ ಮಾಡಿ ಕೈಗೆ ಹಣ ಸೇರುವ ಸಮಯ ಹತ್ತಿರವಿತ್ತು. ಆದರೆ ಮಳೆ ನೀರಿನಿಂದ ಜಮೀನಿನ ಕೆಸರಿನಲ್ಲಿ ಬೆಳೆಗಳು ಹುದುಗಿಕೊಂಡು ಮೊಳಕ್ಕೆ ಒಡೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ರೈತರಿಗೆ ಸಂಕಷ್ಷ ಎದುರಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೋಟೆಗಂಗೂರು: ಒಂದು ಶಾಲೆ, ಮೂರು ಕಟ್ಟಡ; 2 ಕಿಲೋ ಮೀಟರ್ ಅಂತರ!
“ರೈತರ ನೆರವಿಗೆ ಸರ್ಕಾರ ಬರಬೇಕು ಮತ್ತು ಅತಿವೃಷ್ಟಿಯಿಂದ ಹಾಳಾದ ರೈತರ ಬೆಳೆ, ಜಮೀನುಗಳ ಸರ್ವೆ ಮಾಡಿಸಬೇಕು. ಬೆಳೆಗೆ ದರ ನಿಗದಿಪಡಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಸಂಘ ಒತ್ತಾಯಿಸುತ್ತದೆ ಎಂದು ತಿಳಿಸಿದರು.
