ಗ್ಯಾಸ್ ಸಿಲಿಂಡರ್ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಗ್ರಾಹಕರು ನೇರವಾಗಿ ಗ್ಯಾಸ್ ಎಜೆನ್ಸಿಗೆ ಬಂದು ಬೆರಳು ಒತ್ತುವ ಮೂಲಕ ಕೆವೈಸಿ ಮಾಡಿಸಲು ಚಿತ್ತಾಪುರದಲ್ಲಿ ಗ್ರಾಹಕರು ಅಂಗಡಿಯ ಎದುರು ನಾಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದಾರೆ.
ಬ್ಯಾಂಕ್ ಗ್ರಾಹಕರಿಗೆ ಸೀಮಿತವಾಗಿದ್ದ ಕೆವೈಸಿ ಅಪ್‌ಡೇಟ್ ಅನ್ನು ಈಗ ತೈಲ ಕಂಪನಿಗಳು ತಮ್ಮ ಅಡುಗೆ ಅನಿಲ ಗ್ರಾಹಕರಿಗೂ ಕಡ್ಡಾಯಗೊಳಿಸಿ ಒಂದಕ್ಕಿಂತ ಹೆಚ್ಚು ಅನಿಲ ಸಂಪರ್ಕ ಪಡೆದಿರುವುದು ಸೇರಿದಂತೆ ಗೃಹ ಬಳಕೆ ಸಿಲಿಂಡರ್ ಸಂಪರ್ಕ ದುರ್ಬಳಕೆಯಾಗುವುದನ್ನು ತಪ್ಪಿಸಲು ತೈಲ ಕಂಪನಿಗಳು, ಗ್ರಾಹಕರ ಕೆವೈಸಿ ಅಪ್‌ಡೇಟ್ ಮಾಡುವಂತೆ ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಮತ್ತು ಸಾಮಾನ್ಯ ಗ್ರಾಹಕರಿಗೆ ಏಳೂ ರೂಪಾಯಿ ಸಬ್ಸಿಡಿ ಹಾಗೂ ಉಜ್ವಲ ಯೋಜನೆಯ ಗ್ರಾಹಕರಿಗೆ ಮುನ್ನೂರು ರೂಪಾಯಿ ಸಬ್ಸಿಡಿಯನ್ನು ಗ್ರಾಹಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕೆವೈಸಿ ಕಡ್ಡಾಯವಾಗಿದೆ.
ಡಿಸೆಂಬರ್ 31ರ ವೇಳೆಗೆ ಕೆವೈಸಿ ಮಾಡಿಸುವುದು ಕಡ್ಡಾಯದ ಹಿನ್ನೆಲೆಯಲ್ಲಿ ಗ್ರಾಹಕರು ಸ್ವತಃ ಬಂದು ಬೆರಳಿನ ಗುರುತು ನೀಡಲು ಎಜೆನ್ಸಿಯ ಎದುರು ನಾಮುಂದು ತಾಮುಂದು ಎಂದು ಮುಗಿ ಬೀಳುತ್ತಿದ್ದಾರೆ.
ಇನ್ನು ಗ್ರಾಹಕರ ಕೆವೈಸಿ ಮಾಡಿಸಲು ನೇರವಾಗಿ ಎಜೆನ್ಸಿಯ ಅಂಗಡಿಗೆ ಬಂದು ಬೆರಳಿನ ಗುರುತು ನೀಡಬೇಕು ಇಲ್ಲವೆ ಗ್ಯಾಸ ಸಿಲಿಂಡರ್ ವಿತರಿಸುವರು ನೇರವಾಗಿ ಗ್ರಾಹಕರ ಮನೆಮನೆಗೆ ಹೋಗಿ ಭಾವಚಿತ್ರದ ಮೂಲಕ ಕೆವೈಸಿ ಮಾಡಬೇಕು ಎಂದು ಎಜೆನ್ಸಿಯವರಿಗೆ ಸೂಚನೆ ನೀಡಿದೆ. ಆದರೆ, ಗ್ರಾಹಕರ ಮನೆಗಳಿಗೆ ವಿತರಕರು ಬಾರದೆ ಇರುವುದರಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಗ್ರಾಹಕರು ಕೆಲಸ ಕಾರ್ಯ ಬಿಟ್ಟು ದಿನವಿಡಿ ನಿಲ್ಲುವ ಅನಿವಾರ್ಯತೆ ಉಂಟಾಗಿದೆ ಎಂದು ಗ್ರಾಹಕರ ಮಾತಾಗಿದೆ.
ಗ್ರಾಹಕರ ಮನೆಗಳಿಗೆ ನೇರವಾಗಿ ಹೋಗಿ ಕೆವೈಸಿ ಮಾಡಬೇಕು ಎಂಬ ಸೂಚನೆ ಇದ್ದರು ಎಜೆನ್ಸಿಯವರು ಪಾಲನೆ ಮಾಡುತ್ತಿಲ್ಲ ಇದರಿಂದ ಗ್ರಾಮಗಳಲ್ಲಿರುವ ಗ್ರಾಹಕರು ಕೂಲಿ ಕೆಲಸಕ್ಕೆ ಬಿಟ್ಟು ಒಂದು ದಿನದ ಸುಮಾರು ನಾಲ್ಕುನೂರು ರುಪಾಯಿ ಕಳೆದುಕೊಳ್ಳುತ್ತಿದ್ದಾರೆ,ಆದ್ದರಿಂದ ಗ್ರಾಮಗಳಿಂದ ಬರುವ ಗ್ರಾಹಕರಿಗೆ ಎಜೆನ್ಸಿಯವರು ಒಂದು ದಿನದ ಅರ್ದದಷ್ಟು ಸಂಬಳ ನೀಡಬೇಕು ಎನ್ನುತ್ತಾರೆ ಕರವೇ ತಾಲೂಕ ಅಧ್ಯಕ್ಷ ನರಹರಿ ಕುಲಕರ್ಣಿ.
ತಾಲೂಕಿನ ಚಿತ್ತಾಪುರ ಮತ್ತು ವಾಡಿ ಪಟ್ಟಣ ಸೇರಿದಂತೆ ಒಟ್ಟು 20ಸಾವಿರಕ್ಕು ಹೆಚ್ಚು ಜನ ಗ್ರಾಹಕರಿದ್ದು ಗ್ಯಾಸ್ ದುರುಪಯೋಗ ತಡೆಗಟ್ಟಲು ಮತ್ತು ಅರ್ಹ ಗ್ರಾಹಕರಿಗೆ ನೇರವಾಗಿ ಸಬ್ಸಿಡಿ ಪಡೆಯಲು ಕೆವೈಸಿ ಕಡ್ಡಾಯವಾಗಿದೆ. ಗ್ರಾಮಗಳಲ್ಲಿ ಗ್ಯಾಸ್ ವಿತರಕರಿಂದ ಯ್ಯಾಪ್ ಡೌನ್ಲೋಡ್ ಮಾಡಿಕೊಂಡು ಕೆವೈಸಿ ಮಾಡಬೇಕು ಆದರೆ ತಾಂತ್ರಿಕ ಸಮಸ್ಯೆ ಆಗುತ್ತಿರುವುದರಿಂದ ಸಮಸ್ಯೆ ಆಗುತ್ತಿದೆ. ಇಕೆವೈಸಿ ಮಾಡಿಕೊಳ್ಳಲು ಎಜೆನ್ಸಿಗೆ ಬಂದ ಗ್ರಾಹಕರಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಟೆಂಟ್ ವ್ಯವಸ್ಥೆ ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಎಜೆನ್ಸಿ ಮಾಲೀಕ ನಾಗರಾಜ ಪರಂಡೆ ಮಾಹಿತಿ ನೀಡಿದ್ದಾರೆ.