ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ʼಪ್ರೇರಣಾ ಅಭಿಯಾನʼಕ್ಕೆ ಚಾಲನೆ ನೀಡಿ, ಲೋಗೋವನ್ನು ಬಿಡುಗಡೆಗೊಳಿಸಲಾಗಿದೆ. ಹೆಣ್ಣು ಮಕ್ಕಳಿಗೆ ಸುಸ್ಥಿರವಾಗಿ ತಮ್ಮ ಮುಟ್ಟಿನ ಮಾಸವನ್ನು ನಿರ್ವಹಿಸಲು ಉಚಿತವಾಗಿ ಮುಟ್ಟಿನ ಕಪ್‌ನ್ನು ವಿತರಿಸಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಮುಟ್ಟಿನ ನೈರ್ಮಲ್ಯದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಆರೋಗ್ಯ, ನೈರ್ಮಲ್ಯ, ಘನತೆ ಮತ್ತು ಸಬಲೀಕರಣ ಸಾಧಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಪ್ರೇರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮದ ವತಿಯಿಂದ 1.57 ಕೋಟಿ ರೂ. ಹಾಗೂ ಕೆಕೆಆರ್‌ಡಿಬಿ ವತಿಯಿಂದ 2.01 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯಲ್ಲಿ 1.03 ಲಕ್ಷ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇನ್ನು ಆಶಾಕಿರಣ ಯೋಜನೆಯಡಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಒಟ್ಟು 1.12 ಕೋಟಿ ಜನರ ಕಣ್ಣು ಪರೀಕ್ಷೆ ಮಾಡುವ ಗುರಿಹೊಂದಿದ್ದು, ಪರೀಕ್ಷೆ ಮಾಡಿಸಿದವರಲ್ಲಿ ಅಗತ್ಯ ಇರುವವರಿಗೆ ಈಗಾಗಲೇ 3.32 ಲಕ್ಷ ಕನ್ನಡಕ ವಿತರಣೆ ಮಾಡಲಾಗಿದೆ ಎಂದರು.
ಕಲಬುರಗಿ ಜಿಲ್ಲೆಯೊಂದರಲ್ಲೇ ಸ್ಕ್ರೀನಿಂಗ್ ಒಳಪಟ್ಟ 21 ಲಕ್ಷ ಜನರಲ್ಲಿ, ಅಗತ್ಯವಿರುವ 75,200 ಜನರಿಗೆ ಸರ್ಜರಿ ಮಾಡಲಾಗಿದ್ದು, ಇದಕ್ಕಾಗಿ ₹ 61 ಕೋಟಿ ವೆಚ್ಚ ಭರಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾದಗಿರಿ ಸೇರಿದಂತೆ ಮತ್ತೆ ಎಂಟು ಜಿಲ್ಲೆಗಳಿಗೆ ಈ ಕಾರ್ಯಕ್ರಮ ವಿಸ್ತರಿಸುವ ಆಲೋಚನೆ ಇದೆ. ಒಟ್ಟಾರೆ ರಾಜ್ಯದಲ್ಲಿ ಪ್ರತಿಯೊಬ್ಬರು ತಮ್ಮ ಕಣ್ಣುಗಳ ರಕ್ಷಣೆಗೆ ಬೇಕಾಗುವ ತಪಾಸಣೆ ಹಾಗೂ ಸರ್ಜರಿಗೆ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡು ರಾವ್, ಡಾ. ಅಜಯ್ ಸಿಂಗ್, ಅಲ್ಲಮಪ್ರಭು ಪಾಟೀಲ್, ಕಲಬುರಗಿ ಜಿಲ್ಲಾಧಿಕಾರಿ, ಖಾನಿಜ್ ಫಾತಿಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.