ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ 2023-24ನೇ ಸಾಲಿನ ತಾಲೂಕು ಪಂಚಾಯತ್ ಯೋಜನೆಗಳಾದ ಅನಿರ್ಬಂಧಿತ ಅನುದಾನದಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ದಲಿತ ಸೇನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಚಿಂಚೋಳಿ ನಗರದ ತಾಂಡುರ್ ಕ್ರಾಸ್‌ನಿಂದ ತಹಶೀಲ್ದಾರ್ ಕಚೇರಿವರಗೆ ದಲಿತ ಸೇನೆ ಸಮಿತಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ತಹಶೀಲ್ದಾರ್ ಮುಖಾಂತರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಮನವಿ ಸಲ್ಲಿಸಿದರು.
ಯುವಮೋರ್ಚಾ ತಾಲೂಕು ಅಧ್ಯಕ್ಷ ಚೇತನ್ ನಿರಾಳಕರ್ ಮಾತನಾಡಿ, “ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಂಕರ ರಾಠೋಡ ಸೇರಿದಂತೆ ಸಂಬಂಧಪಟ್ಟ ಜೆಇ, ಎಇಇ ಮತ್ತು ಗುತ್ತಿಗೆದಾರರು ಸೆರಿಕೊಂಡು ತಾಲೂಕು ಪಂಚಾಯತ್ ಅನುದಾನ ₹1.76 ಕೋಟಿಯನ್ನು ದುರ್ಬಳಕೆ ಮಾಡಿದ್ದಾರೆ” ಎಂದು ಆರೋಪಿಸಿದರು.
“ಹೀಗೆ ಅವ್ಯವಹಾರ ಮಾಡಿರುವಂತಹ ಕಾಮಗಾರಿಗಳನ್ನು ಕುರಿತು ತನಿಖೆ ಮಾಡಿ ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕೂಡಲೇ ಸೇವೆಯಿಂದ ವಜಾ ಮಾಡಬೇಕು” ಎಂದು ಆಗ್ರಹಿಸಿದರು.
“2023-24ನೇ ಸಾಲಿನ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹಲವಾರು ಅನುದಾನಗಳನ್ನು ಶಿಕ್ಷಣ ಇಲಾಖೆ ಅಭಿವೃದ್ಧಿಗೆ ಮತ್ತು ರಿಪೇರಿಗೆ ಸುಮಾರು ₹81,55,444 ಮತ್ತು ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸುಮಾರು ₹22,87,666 ಹಾಗೂ ಗ್ರಂಥಾಲಯ ಅಭಿವೃದ್ಧಿಗೆ ₹24,87,666 ಮತ್ತು ಕೂಸಿನ ಮನೆ ಶಿಶುಪಾಲನಾ ಅಭಿವೃದ್ಧಿಗೆ ₹16,50,000 ಸೇರಿದಂತೆ ಇತರೆ ವಲಯ ಅಭಿವೃದ್ಧಿ, ಅಂಗವಿಕಲ ಕಲ್ಯಾಣಕ್ಕಾಗಿ ಹಣವನ್ನು ಮಿಸಲಿಟ್ಟು ಗ್ರಾಮಗಳ ಅಭಿವೃದ್ಧಿಗೆ ಕೊಟ್ಯಾಂತರ ರೂಪಾಯಿ ವೆಚ್ಚ ಮಾಡಬೇಕಾಗಿತ್ತು.
“ಅಭಿವೃದ್ಧಿಗೆ ಖರ್ಚು ಮಾಡಬೇಕಾದ ತಾಲೂಕು ಪಂಚಾಯತ್ ಅನುದಾನ ಯೋಜನೆ 2023-24ನೇ ಸಾಲಿನ ಅನಿರ್ಬಂಧಿತ ಅಭಿವೃದ್ಧಿ ಅನುದಾನದ ಕ್ರೀಯಾ ಯೋಜನೆಯಲ್ಲಿ ಒಟ್ಟು ತಾಲೂಕಿನ ವ್ಯಾಪ್ತಿಗೆ ಬರುವ 111 ಕಾಮಾಗಾರಿಗಳಲ್ಲಿ ಯಾವುದೇ ಕಾಮಾಗಾರಿಯೂ ಸಂಪೂರ್ಣವಾಗಿಲ್ಲ. ಅಂದಾಜು ಪತ್ರಿಕೆ ಪ್ರಕಾರ ಕಾಮಗಾರಿ ಮಾಡದೆ ಕಳಪೆ ಮಟ್ಟದಿಂದ ಹಾಗೂ ಕಾಮಗಾರಿ ಅರ್ಧಂಬರ್ಧವಾಗಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ| ಅಕ್ರಮವಾಗಿ ಮದ್ಯ ಮಾರಾಟ; ಕ್ರಮಕ್ಕೆ ಬಿಎಸ್‌ಪಿ ಅಗ್ರಹ
“ಈ ಅವ್ಯವಹಾರ ಮಾಡಿರುವ ಹಣವನ್ನು ಸರ್ಕಾರಕ್ಕೆ ಮರಳಿ ಕಟ್ಟಿಸಬೇಕು. ಒಂದು ವೇಳೆ ಈ ಅವ್ಯವಹಾರವನ್ನು ತನಿಖೆ ಮಾಡುವಲ್ಲಿ ವಿಳಂಬ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರಾಘವೇಂದ್ರ ಎಸ್ ಹೂವಿನಭಾವಿ, ಬಸವರಾಜ ಸೈದಕನೊರ್, ಸುನೀಲ ತ್ರಿಪಾಠಿ, ದೆವೀಂದ್ರಪ್ಪ ಕಟ್ಟಿಮನಿ, ಖತಲಪ್ಪ ಬಸಪ್ಪನೊರ್, ರಮೇಶ ಕುಡ್ಡಳ್ಳಿ, ವೀರಶೇಟ್ಟಿ ಎಚ್ ಡಿ, ಮಾರುತಿ ತೇಗಲತಿಪ್ಪಿ, ರಾಜಕುಮಾರ ದೋಟಿಕೋಳ ಸೇರಿದಂತೆ ಇತರರು ಇದ್ದರು.
