ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆ ನಿರ್ಮಾಣ ಮಾಡುವಂತೆ ಹಲವಾರು ವರ್ಷಗಳ ಬೇಡಿಕೆ ಈಡೇರಿಸುವಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ಕಾರ್ಪೊರೇಷನ್ ಅಧಿಕಾರಿಗಳು, ಶಾಸಕ ಶರಣಪ್ರಕಾಶ ಪಾಟೀಲ್ ವಿಫಲರಾಗಿದ್ದಾರೆ.
‘ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಕೆಇಬಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು ವರ್ಷಗಳಿಂದ ತಡೆಗೋಡೆ ನಿರ್ಮಾಣ ಮಾಡುವಂತೆ ಹಲವಾರು ವರ್ಷಗಳಿಂದ ಶಾಲೆಯ ಮುಖ್ಯೋಪಾಧ್ಯಾಯರು ಕಾರ್ಪೊರೇಷನ್ ಕಚೇರಿಗೆ ಮನವಿ ಸಲ್ಲಿಸಿದರು, ಶಾಸಕರಿಗೆ ತಿಳಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಶಾಲೆಯ ಶಿಕ್ಷಕರು.
“ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಒಟ್ಟು 162 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಒಬ್ಬ ಶಿಕ್ಷಕರು, ಅತಿಥಿ ಶಿಕ್ಷಕರು ಸೇರಿದಂತೆ ಒಟ್ಟು ಎಂಟು ಮಂದಿ ಶಿಕ್ಷಕರು ಇದ್ದು, ವಿಜ್ಞಾನ ವಿಷಯವನ್ನು ಪೋಸ್ಟ್ ಗ್ರಾಜ್ಯುಯೇಟ್ ಶಿಕ್ಷಕರು ತೆಗೆದುಕೊಳ್ಳುತ್ತಾರೆ. ಇನ್ನುಳಿದ ವಿಷಯಗಳಾದ ಕನ್ನಡ, ಗಣಿತ, ಇಂಗ್ಲಿಷ್ ವಿಷಯಗಳಿಗೆ ವಿಷಯವಾರು ಶಿಕ್ಷಕರಿಲ್ಲ. ಹಾಗಾಗಿ ಶಾಲೆಯಲ್ಲಿರುವ ಶಿಕ್ಷಕರೇ ಎಲ್ಲ ವಿಷಯಗಳ ತರಗತಿ ನಡೆಸುವುದು ಅನಿವಾರ್ಯವಾಗಿದೆ” ಎಂದು ತಿಳಿಸಿದರು.

“ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲ. ಮಕ್ಕಳ ಶೌಚಾಲಯ ಬಿದ್ದು ಎರಡು ವರ್ಷಗಳಾಗಿವೆ, ಇದರಿಂದ ಮಕ್ಕಳು ಶೌಚಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿದೆ” ಎಂದು ಶಾಲೆಯ ಶಿಕ್ಷಕರು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಅನುಸುಯಾ ಈ ದಿನ.ಕಾಮ್‌ನೊಂದಿಗೆ ಮಾತಾನಾಡಿ, “ಶಾಲೆಯ ತಡೆಗೋಡೆ ನಿರ್ಮಾಣ ಕುರಿತು ಅನೇಕ ಬಾರಿ ಕಾರ್ಪೊರೇಷನ್ ಕಚೇರಿ ಹಲವಾರು ಬಾರು ಮನವಿ ಸಲ್ಲಿಸಿದ್ದೇವೆ, ಮಾಡುತ್ತೇವೆಂದು ಹೇಳುತ್ತಾರೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಶಾಲೆಯ ವಾತಾವರಣ ತುಂಬಾ ಹದಗೆಟ್ಟಿದೆ. ರಾತ್ರಿ ವೇಳೆ ನಮ್ಮ ಶಾಲೆಯ ಆವರಣದಲ್ಲಿ ಕುಡುಕರ, ಪುಂಡರ ಅಡ್ಡವಾಗಿ ಮಾರ್ಪಾಡಾಗುತ್ತದೆ. ಕುಡುಕರು ಕುಡಿದ ಅಮಲಿನಲ್ಲಿ ಬೀಡಿ, ಸಿಗರೇಟ್, ಗುಟುಕಾ ತಿಂದು ಹುಗುಳಿ ಹೊಲಸು ಮಾಡುತ್ತಾರೆ. ಶಾಲೆಯ ಗೋಡೆಗಳ ಮೇಲೆ ಗೀಚುತ್ತಾರೆ. ಇದರಿಂದ ನಮ್ಮ ಶಾಲೆಯ ಅಂದ, ವಾತಾವರಣ ಎರಡೂ ಹಾಳಾಗುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಆತ್ಮಗೌರವ, ಸ್ವಾಭಿಮಾನಕ್ಕಾಗಿ ನಡೆದ ಏಕೈಕ ಯುದ್ದ ಭೀಮಾ ಕೋರೆಗಾಂವ್: ಕವಿ ವೀರಪ್ಪ ತಾಳದವರ
“ಸಂಬಂಧಪಟ್ಟ ಶಾಸಕರು, ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ಶಾಲೆಗೆ ತಡೆಗೋಡೆ, ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.