ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 27ರಂದು ರಾಜಭವನ ಚಲೋ ಕರೆ ನೀಡಲು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಕಲಬುರಗಿ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಅನಂತ್ ನಾಯಕ್ ಮಾತನಾಡಿ, “ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ತನಿಖೆಗೆ ಅನುಮತಿ ಕೊಡುವಾಗ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಪಾಳೆಗಾರಿಕೆ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಪಕ್ಷಗಳು ರಾಜಭವನವನ್ನು ತಮ್ಮ ಕಚೇರಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ” ಎಂದರು.
“ರಾಜ್ಯಪಾಲರು ಬಿಜೆಪಿ-ಜೆಡಿಎಸ್ ಪಕ್ಷಗಳ ತಾಳಕ್ಕೆ ಕುಣಿಯುತ್ತಿರುವುದಷ್ಟೇ ಅಲ್ಲ ತೀವ್ರ ಪಕ್ಷಪಾತಿ ಧೋರಣೆಯನ್ನು ತಾಳಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳ ವಿರುದ್ಧ ನಡೆಯುತ್ತಿರುವ ಪಿತೂರಿ- ಷಡ್ಯಂತ್ರಗಳ ಭಾಗವಾಗಿದ್ದಾರೆ. ಆ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ದುಷ್ಟರು, ಭ್ರಷ್ಟರೂ ಆದ ಬಿಜೆಪಿ-ಜೆಡಿಎಸ್ ಪಕ್ಷಗಳ ಹಿತಾಸಕ್ತಿಗೆ ಅಡ ಇಟ್ಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕರ್ನಾಟಕ ಲೋಕಾಯುಕ್ತ, ಎಸ್‌ಐಟಿ ಮುಂತಾದ ತನಿಖಾ ಸಂಸ್ಥೆಗಳೂ ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಪ್ರಮುಖ ಕುಮಾರಸ್ವಾಮಿಯವರ ಗಣಿ ಹಗರಣ, ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣ, ಜನಾರ್ಧನ ರೆಡ್ಡಿಯವರ ಭೀಕರ ಆಸ್ತಿ ಗಳಿಕೆ, ನಿರಾಣಿಯವರ ಭ್ರಷ್ಟಾಚಾರಗಳ ಕುರಿತು ತನಿಖೆಗೆ ಅನುಮತಿ ಕೊಡಿ ಎಂದು ರಾಜಭವನಕ್ಕೆ ಕೋರಿಕೆ ಸಲ್ಲಿಸಿ ವರ್ಷಗಳಾದರೂ ಈ ರಾಜ್ಯಪಾಲರು ಈ ಕೋರಿಕೆಗಳನ್ನು ಕಸದ ಬುಟ್ಟಿಗೆ ಎಸೆದು ಪಕ್ಷಪಾತ ಮಾಡಿದ್ದಾರೆ. ಈವರೆಗೆ ಒಬ್ಬರ ಮೇಲೂ ವಿಚಾರಣೆಗೆ ಅನುಮತಿ ನೀಡಿಲ್ಲ” ಎಂದು ಆರೋಪಿಸಿದರು.
“ಬ್ಲ್ಯಾಕ್ ಮೇಲರ್‌ಗಳು, ಕ್ರಿಮಿನಲ್ ಕೇಸ್‌ಗಳು ಬಾಕಿ ಇರುವ ಆರೋಪಿಗಳು ಕೊಟ್ಟ ದೂರು-ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ಕೂಡ ಮಾಡದೆ ದೂರರ್ಜಿ ಸ್ವೀಕರಿಸಿದ ದಿನವೇ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿಗಳಿಗೆ ಕಾರಣ ಕೇಳುವ ನೋಟಿಸ್ ನೀಡಿದ್ದಾರೆ. ದೂರದಾರರ ಅರ್ಜಿ ಬರೀ ಸುಳ್ಳುಗಳಿಂದ ಕೂಡಿದೆ. ರಾಜ್ಯಪಾಲರು ನೀಡಿರುವ ನೋಟಿಸ್ ದೋಷಪೂರಿತವೆಂದು ಇಡೀ ಸಚಿವ ಸಂಪುಟ ಚರ್ಚೆ ಮಾಡಿ ಕೂಡಲೇ ನೋಟಿಸ್ ವಿತ್ ಡ್ರಾ ಮಾಡುವಂತೆ ನಿರ್ಣಯ ಮಾಡಿ ರಾಜಭವನಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಯವರು ದೀರ್ಘವಾದ ಪ್ರತಿಕ್ರಿಯೆ ಕಳುಹಿಸಿ ಕೊಟ್ಟಿದ್ದಾರೆ. ಇದಾವುದನ್ನೂ ಪರಿಗಣಿಸದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಿರುಕುಳ ನೀಡಬೇಕೆಂದು ತೀರ್ಮಾನಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಡಾ ವಿಚಾರದಲ್ಲಿ ಒಂದು ಸೂಜಿಮೊನೆಯಷ್ಟೂ ತಪ್ಪು ಮಾಡಿಲ್ಲವೆಂದು ಇಡೀ ರಾಜ್ಯದ ಜನ ಹೇಳುತ್ತಿದ್ದಾರೆ ಹಾಗೂ ಸರ್ಕಾರಿ ದಾಖಲೆಗಳೂ ಹೇಳುತ್ತಿವೆ. ಆದರೆ ರಾಜಕೀಯ ದುರುದ್ದೇಶದಿಂದ ಬಿಜೆಪಿ-ಜೆಡಿಎಸ್‌ಗಳು ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡುತ್ತಲೇ ಹೊರಟಿದ್ದಾರೆ” ಎಂದರು.
ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಕೂಡಲೇ ನಿಲ್ಲಿಸಬೇಕು. ಸಂವಿಧಾನ ಮತ್ತು ಒಕ್ಕೂಟ ತತ್ವದ ವಿರೋಧಿಯಾದ ರಾಜ್ಯಪಾಲರನ್ನು ಮೋದಿ ಸರ್ಕಾರ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು. ಸಿದ್ದರಾಮಯ್ಯನವರ ತನಿಖೆ ಅನುಮತಿಯನ್ನು ಹಿಂಪಡೆಯಬೇಕು. ಪ್ರಜಾಪ್ರಭುತ್ವ ಒಕ್ಕೂಟದ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರದ ಸಾರ್ವಭೌಮತೆಯನ್ನು ಸಂರಕ್ಷಿಸಬೇಕು. ಕನ್ನಡ ನಾಡಿನ ಘನತೆಯನ್ನು ಕಾಪಾಡಬೇಕು” ಎಂದು ಆಗ್ರಹಿಸಿದರು.
“ಆಗಸ್ಟ್ 27ರಂದು ಆಯೋಜಿಸಿರುವ ರಾಜಭವನ ಚಲೋ ಬೃಹತ್ ಪ್ರತಿಭಟನೆಯಲ್ಲಿ ನಾಡಿನ ಪ್ರಜ್ಞಾವಂತರು, ಪ್ರಗತಿಪರರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯ ಬಂಧುಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೊಲೆ ಪ್ರಕರಣ : 18 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಮಹಾಂತೇಶ ಕೌಲಗಿ,
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸುನೀಲ ಮಾರುತಿ, ಮಾನಡೆ ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಆದರ್ಶ ಯಲ್ಲಪ್ಪ ಸೇರಿದಂತೆ ಹಲವು ಸಂಘಟನೆಯ ಮುಖಂಡರು ಇದ್ದರು.