ಕೆಸರುಗದ್ದೆಯಂತಾದ ರಸ್ತೆ ಮಧ್ಯೆ ನೇಗಿಲಿನಿಂದ ಉತ್ತು, ಸಸಿ ನೆಡುವ ಮೂಲಕ ರೈತರು, ರೈತ ಪರ ಸಂಘಟನೆಗಳ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಕೆಸರುಗದ್ದೆಯಂತಾಗಿರುವ ಕಾರಣದಿಂದಾಗಿ ಭಂಕಲಗಾ ಗ್ರಾಮದ ರೈತಪರ ಸಂಘಟನೆಯ ಯುವಕರು ಮತ್ತು ರೈತರು ರಸ್ತೆಯ ಮಧ್ಯದಲ್ಲಿ ನೇಗಿಲಿನಿಂದ ಉತ್ತು ಬೀಜ ಬಿತ್ತನೆ ಮಾಡಿ, ರಸ್ತೆಯ ಮಧ್ಯದಲ್ಲಿ ಸಸಿ ನೆಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಭಂಕಲಗಾ ಗ್ರಾಮದ ಮುಖ್ಯರಸ್ತೆಯು ಕಳೆದ ಕೆಲ ತಿಂಗಳುಗಳಿಂದ ಸಂಪೂರ್ಣವಾಗಿ ಹಾಳಾಗಿತ್ತು. ಇತ್ತೀಚಿನ ದಿನಗಳಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯು ಸಂಪೂರ್ಣವಾಗಿ ಕೆಸರುಗದ್ದೆಯಂತಾಗಿದೆ. ಈ ಕುರಿತಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ರಸ್ತೆ ದುರಸ್ತಿ ಕಾಮಗಾರಿ ಮಾಡಿಲ್ಲವೆಂಬುದು ಸ್ಥಳೀಯರ ಆರೋಪವಾಗಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷ ಮೌನೇಶ್ ಭಂಕಲಗಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕೆಸರುಗದ್ದೆಯಂತಿರುವ ರಸ್ತೆಯಲ್ಲಿ ಪ್ರತಿದಿನ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದಾರೆ. ಅಲ್ಲದೆ ಗ್ರಾಮದ ವೃದ್ಧರು ಈ ರಸ್ತೆಯಲ್ಲಿ ತಿರುಗಾಡಲು ಹರಸಾಹಸ ಪಡುತ್ತಿದ್ದಾರೆ. ಈ ಗ್ರಾಮದಿಂದ ಬಹುತೇಕ ಮಕ್ಕಳು ಶಾಲೆ-ಕಾಲೇಜಿಗೆ ಹೋಗುತ್ತಾರೆ. ಈ ವೇಳೆ ಅವರ ಸಮವಸ್ತ್ರಗಳು ಸಂಪೂರ್ಣವಾಗಿ ಕೆಸರು ಮಯವಾಗುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಸ್ತೆಗಳು ಅವ್ಯವಸ್ಥೆಯಿಂದ ಕೂಡಿದ್ದರೂ ಅಭಿವೃದ್ಧಿ ಅಧಿಕಾರಿಗಳು ದುರಸ್ತಿ ಕಾರ್ಯ ಮಾಡದೇ ಇರುವುದು ಖಂಡನೀಯ. ಶೀಘ್ರದಲ್ಲಿಯೇ ರಸ್ತೆ ದುರಸ್ತಿ ಕಾಮಗಾರಿ ಮಾಡಿ ಸಾರ್ವಜನಿಕರಿಗೆ ತಿರುಗಾಡಲು ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.

ಗ್ರಾಮದ ಮುಖ್ಯ ರಸ್ತೆಯು ಸಂಪೂರ್ಣವಾಗಿ ಕೆಟ್ಟು ಹೋಗಿರುವುದು ದುರಸ್ತಿ ಕಾರ್ಯದ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ ಅಭಿವೃದ್ಧಿ ಅಧಿಕಾರಿ ಬಂದು ನೋಡುತ್ತೇನೆಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆಯೇ ಹೊರತು ಯಾವುದೇ ಕಾರ್ಯ ಮಾಡುತ್ತಿಲ್ಲ. ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾಣದಂತಾಗಿದೆ. ಇಂತಹ ಅಧಿಕಾರಿಗಳ ವಿರುದ್ದ ಶಾಸಕ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಗಮನ ಹರಿಸಿ ಸೂಕ್ತ ಕ್ರಮ ಕೈಗೊಂಡು ಗ್ರಾಮದ ಅಭಿವೃದ್ಧಿ ಮಾಡಬೇಕು” ಎಂದು ಒತ್ತಾಯಿಸಿದರು.
ಆಕ್ರೋಶಗಗೊಂಡ ರೈತ ಪರ ಸಂಘಟನೆಯ ಪದಾಧಿಕಾರಿಗಳು ಮತ್ತು ಗ್ರಾಮದ ಯುವಕರು ಸೇರಿಕೊಂಡು ರಸ್ತೆಯ ಮದ್ಯದಲ್ಲಿ ನೇಗಿಲು ಹಿಡಿದು ಬೀಜ ಬಿತ್ತನೆ ಮಾಡಿ, ರಸ್ತೆಯಲ್ಲಿಯೇ ಸಸಿ ನೆಡುವ ಮೂಲಕ ಅಭಿವೃದ್ಧಿ ಅಧಿಕಾರಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪಂಪ್‌ಸೆಟ್ ಮುಳುಗುವ ಭೀತಿಯಲ್ಲಿ ರೈತರು; ಬ್ಯಾರೇಜ್ ಗೇಟ್ ತೆರೆಯಲು ರೈತರಿಂದ ದಿಢೀರ್ ಪ್ರತಿಭಟನೆ
ಪಿಡಿಒ ಬಸವರಾಜ ರಾಜೊಳ್ಳಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗ್ರಾಮದಲ್ಲಿ ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಜಲ ಜೀವನ್ ಮಿಷನ್ ಅಭಿಯಾನದಲ್ಲಿ ಕಾರ್ಯ ಮಾಡಲಾಗುತ್ತಿದೆ. ಈ ಕಾರ್ಯ ಮಾಡಲು ಜೆಜೆಎಂನವರು ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿ ನೀಡದೆ ರಸ್ತೆ ಅಗೆದಿರುವುದರಿಂದ ರಸ್ತೆಯ ಮೇಲೆ ಮಣ್ಣು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ರಸ್ತೆಯನ್ನು ಎರಡು ದಿನದಲ್ಲಿ ತಾತ್ಕಾಲಿಕ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇವೆ. ಜೆಜೆಎಂ ಕಾರ್ಯ ಸಂಪೂರ್ಣವಾಗಿ ಮುಗಿದ ನಂತರ ಖಾಯಂ ದುರಸ್ತಿ ಕಾರ್ಯ ಮಾಡಲಾಗುವುದು” ಎಂದು ಭರವಸೆ ನೀಡಿದರು.
ವರದಿ: ವಾಲೆಂಟಿಯರ್- ಅನಂತ ದೇಶಪಾಂಡೆ