ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ್ಯ ಎಂಬ ವಿದ್ಯಾರ್ಥಿನಿಯ ಕೊಲೆಯನ್ನು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ತೀವ್ರವಾಗಿ ಖಂಡಿಸಿದ್ದು, ಮೃತ ವಿದ್ಯಾರ್ಥಿನಿಗೆ ತೀವ್ರ ಸಂತಾಪ ಸೂಚಿಸಿದರು.
ಕಲಬುರಗಿ ಜಿಲ್ಲೆಯ ಹೊಸ ಆರ್‌ಟಿಒ ಕ್ರಾಸ್ ವೃತ್ತದ ಬಳಿ ಎಐಡಿಎಸ್‌ಒ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಸ್ನೇಹಾ ಕಟ್ಟಿಮನಿ ಮಾತನಾಡಿ, “ಶಾಲಾ ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಅಂಧಃಪತನ ಇಂತಹ ಘಟನೆಗಳಿಗೆ ಕಾರಣ” ಎಂದರು.
“ವಿದ್ಯಾರ್ಥಿಗಳ ಮುಂದೆ ಯಾವುದೇ ಆದರ್ಶಗಳಿಲ್ಲ. ಪಠ್ಯಗಳಲ್ಲಿ ನವೋದಯ ಚಿಂತಕರ, ಕ್ರಾಂತಿಕಾರಿಗಳ ವಿಚಾರ ಪ್ರಕಟಗೊಳ್ಳುವುದಿಲ್ಲ. ಪ್ರೀತಿ- ಪ್ರೇಮದ ವಿಚಾರಗಳಲ್ಲಿ ಸರಿಯಾದ ಮಾರ್ಗದರ್ಶನ ನೀಡುವವರೂ ಇಲ್ಲ. ವಿದ್ಯಾರ್ಥಿ ಸಂಘಟನೆಗಳಿಂದ ದೂರ ಇಟ್ಟಿರುವ ಕಾರಣ ಸಾಮಾಜಿಕ ಮನೋಭಾವ ಕುಂಠಿತಗೊಂಡಿದ್ದು, ವಿದ್ಯಾರ್ಥಿಗಳ ಆಮೂಲಾಗ್ರ ಬೆಳವಣಿಗೆಗೆ ಅಡ್ಡಿಯಾಗಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ವಿದ್ಯಾರ್ಥಿಗಳ ನಡುವೆ ಸಾಂಸ್ಕೃತಿಕ ಆಂದೋಲನ ಹರಿಬಿಡಬೇಕು” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯ ರೈತರಿಗೆ 1,200 ಕೋಟಿ ರೂ. ಬೆಳೆ ವಿಮೆ ಪರಿಹಾರ ನೀಡಲಾಗಿದೆ ಎಂದು ಖೂಬಾ ಹೇಳಿದ್ದು ಸುಳ್ಳು : ಖಂಡ್ರೆ
“ನೇಹಾ ಪ್ರಕರಣದ ಆರೋಪಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕು” ಎಂದು ಎಐಡಿಎಸ್‌ಒ ಕಲಬುರಗಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳು ತುಳಜರಾಮ ಎನ್ ಕೆ, ಜಿಲ್ಲಾ ಉಪಾಧ್ಯಕ್ಷ ಪ್ರೀತಿ ದೊಡ್ಡಮನಿ, ಜಿಲ್ಲಾ ಸಮಿತಿ ಸದಸ್ಯ ಯುವರಾಜ, ರಾಹುಲ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.
