ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 128ನೇ ಜನ್ಮ ದಿನಾಚರಣೆ ಅಂಗವಾಗಿ ನೆನ್ನೆ ಅಖಿಲ ಭಾರತ ಪ್ರಜಾ ಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಒ) ನೇತೃತ್ವದಲ್ಲಿ ಕಲಬುರಗಿಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಬೃಹತ್ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ವಾಡಿಯ ರಮಾಬಾಯಿ ಅಂಬೇಡ್ಕರ್ ಕನ್ಯಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಸವರಾಜ ಹೊಸಮನಿ ಮಾತನಾಡಿ, “ಇಂದಿನ ಮಕ್ಕಳು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ನೇತಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಆದರ್ಶ ಮೌಲ್ಯಗಳನ್ನು ಅಳವಡಿಸಿ ಕೊಳ್ಳುವುದು ಬಹಳ ಅವಶ್ಯಕತೆಯಿದೆ. ಚಿಕ್ಕ ವಯಸ್ಸಿನಲ್ಲೇ ಪ್ರಶ್ನೆ ಮಾಡುವ ಹಾಗೂ ಅನ್ಯಾಯದ ವಿರುದ್ಧ ಸಿಡಿದೇಳುವ ಮನೋಭಾವ ಬರಬೇಕು” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ತುಳಜಾ ರಾಮ್ ಎನ್ ಕೆ ಮಾತನಾಡಿ, “ಇಂದು ನಮ್ಮನ್ನು ಆಳುತ್ತಿರುವ ಪಕ್ಷಗಳು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುತ್ತಿವೆ. ಬಡ ಮಕ್ಕಳಿಗೆ ಶಿಕ್ಷಣ ಎಟುಕದ ಹೂವಾಗಿದೆ. ಮತ್ತೊಂದೆಡೆ ರೈತರ, ಕಾರ್ಮಿಕರ ವಿರೋಧಿ ನೀತಿಗಳನ್ನು ತಂದು ಶ್ರಮಿಕರನ್ನು ಸಂಕಷ್ಟದಲ್ಲಿ ದೂಡಿವೆ. ಶಿಕ್ಷಣದಲ್ಲಿ ಜಾತಿ, ಧರ್ಮದ ವಿಷಯಗಳನ್ನು ಹರಡುತ್ತಿವೆ. ಇನ್ನೊಂದೆಡೆ ಸಮಾಜದಲ್ಲಿ ನೈತಿಕ ಮೌಲ್ಯಗಳ ಕೊರತೆ ಯುವಕರನ್ನು ನೈಜ ವಿಷಯಗಳಿಂದ ದಾರಿ ತಪ್ಪಿಸುತ್ತಿವೆ. ಇದರಿಂದ ಪ್ರತಿದಿನ ವಯಸ್ಸಿನ ಮಿತಿ ಇಲ್ಲದೆ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಮಹಿಳೆಯರ ಮೇಲೆ ಅತ್ಯಾಚಾರದಂತಹ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನೇತಾಜಿ ಅವರಂತಹ ಮಹಾನ್ ವ್ಯಕ್ತಿಗಳ, ವ್ಯಕ್ತಿತ್ವಗಳ ಸಂಘರ್ಷ ಭರಿತ ಜೀವನ ಹಾಗೂ ವಿಚಾರಗಳ ಅವಶ್ಯಕತೆ ಇದೆ. ಅವೆಲ್ಲವೂ ಸ್ವಾಸ್ಥ್ಯ ಸಮಾಜ ಕಟ್ಟುವಲ್ಲಿ ಮೆಟ್ಟುಲುಗಳಾಗಬೇಕಿವೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೇತಾಜಿ ಅವರ ಜಯಂತಿ ನಿಮಿತ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ| ಕೊಳಚೆ ನಿರ್ಮೂಲನಾ ಮಂಡಳಿ ಮಂಜೂರು ಮಾಡಿದ ಮನೆಗಳ ಪ್ರಾರಂಭಕ್ಕೆ ಒತ್ತಾಯ
ಜನ ಧ್ವನಿ ಜಾಗೃತ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಆರ್ ಕೆ, ಶರಣು ಹೇರೂರು, ವಾಡಿ ಅಶೋಕ ಹಾಳ್ವಿ , ಸಂಘಪ್ಪ ಐತಿವಾಲ್, ಸಿದ್ದಯ್ಯ ಶಾಸ್ತ್ರೀ ನಂದೂರಮಠ, ಮಲ್ಲಿನಾಥ ಹುಂಡೇಕಲ್, ಮಲ್ಲಿಕಾರ್ಜುನ ಗಂಧಿ, ಗೌತಮ ಪರತೂರಕರ್, ಗೋದಾವರಿ ಕಾಂಬ್ಳೆ, ವೆಂಕಟೇಶ್ ದೇವದುರ್ಗ, ದತ್ತು ಹುಡೆಕರ್, ಶಿವಕುಮಾರ ಆಂದೋಲ, ಅವಿನಾಶ್ ಒಡೆಯರ್, ರಾಜು ಒಡೆಯರ್, ಸಿದ್ದಾರ್ಥ್ ತಿಪ್ಪನೂರ್, ಸಂಪತ್, ಶ್ರೀ ಶರಣ ಹೊಸಮನಿ, ಸಪ್ನಾ ಹೊಸಮನಿ, ರೇಣುಕಾ ಹಾಗೂ ವಿವಿಧ ಶಾಲೆಯ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ಯುವಜನರು ಮತ್ತು ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.