ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತ್ತಿಯಲ್ಲಿ ವಿಶ್ವಶಾಂತಿಗಾಗಿ, ಹಾಗೂ ಸನ್ನತ್ತಿಯ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಹಾಗೂ ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತ್ತಿಯಿಂದ ಬೆಂಗಳೂರು ವಿಧಾನಸೌಧದವರೆಗೆ ಸನ್ನತಿ ಪಂಚಶೀಲ ಪಾದಯಾತ್ರೆ ಕಾರ್ಯಕ್ರಮವು ಪ್ರಾರಂಭವಾಯಿತು.
ಬೌದ್ದ ಬಿಕ್ಕು, ಬಿಕ್ಕುಣಿಯರು ಭಗವಾನ್ ಬುದ್ಧರ ಅಸ್ಥಿ [ಧಾತುಗಳ]ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, “ಸಾಮ್ರಾಟ್ ಅಶೋಕ ಚಕ್ರವರ್ತಿ ತನ್ನ ಕೊನೆಯ ದಿನಗಳನ್ನು ಸನ್ನತಿಯಲ್ಲಿಯೇ ಕಳೆದಿದ್ದಾರೆ ಎಂಬ ನಂಬಿಕೆಯಿಂದ ಪಂಚಶೀಲ ಪಾದಯಾತ್ರೆ ಸನ್ನತಿಯಿಂದಲೇ ಆರಂಭ ಮಾಡಿದ್ದೇವೆ. ಇದಕ್ಕೆ ಇನ್ನೊಂದು ಕಾರಣ ಎಂದರೆ ಸನ್ನತಿಯಿಂದಲೇ ಬೌದ್ಧರ ಐತಿಹಾಸಿಕ ಕೇಂದ್ರಗಳ ಅಭಿವೃದ್ಧಿ ಆರಂಭವಾಗಬೇಕು ಹಾಗೂ ಅಶೋಕನ ಶಾಸನಗಳ ಸಂರಕ್ಷಣೆಯಾಗಬೇಕು” ಎಂದರು.

“ಈ ಭಾಗದಲ್ಲಿ ಎಲ್ಲೇ ಅಗೆದರೂ ಸಾಮ್ರಾಟ್ ಅಶೋಕನ ಶಾಸನಗಳು ಹಾಗೂ ಬೌದ್ಧ ಧಮ್ಮದ ಕುರುಹುಗಳು ಸಿಗುತ್ತವೆ. ಧರ್ಮ, ಸಂಸ್ಕಾರ, ಆಚರಣೆಗಳೇ ಇಲ್ಲದ ನಮಗೆ ಜಗತ್ತಿನ ಅತ್ಯಂತ ಶ್ರೇಷ್ಠ ಹಾಗೂ ವೈಜ್ಞಾನಿಕ ಧಮ್ಮವನ್ನು ಬಾಬಾ ಸಾಹೇಬರು ನಮಗೆ ನೀಡಿದ್ದಾರೆ. ಡಾ. ಅಂಬೇಡ್ಕರ್ ಅವರು ನಮಗೆ ಅರ್ಥವಾಗದಿದ್ದರೆ ಧಮ್ಮ ಕೂಡ ನಮಗೆ ಅರ್ಥವಾಗುವುದಿಲ್ಲ. ಸರ್ವಸ್ವವನ್ನು ತ್ಯಾಗ ಮಾಡಿದ ಭಂತೇಜಿಗಳಿಗೆ ಉಪಾಸಕರೆ ಆಸ್ತಿ. ಹಾಗಾಗಿ, ನಾವೆಲ್ಲರೂ ಭಂತೇಜಿಗಳಿಗೆ ಸಹಕರಿಸಬೇಕು” ಎಂದು ಹೇಳಿದರು.
ಭೋದಿ ದತ್ತ ಬಂತೇಜಿ ಮಾತನಾಡಿ, “ಸನ್ನತ್ತಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ಆಂಧ್ರದ ಬುದ್ಧವನ ಮಾದರಿಯಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಿ ಜಾಗತಿಕ ಮಟ್ಟದ ಸೇವೆನ್ ಸ್ಟಾರ್ ಪ್ರವಾಸಿ ತಾಣವನ್ನಾಗಿ ಮಾಡಲು ಕನಿಷ್ಠ 500 ಕೋಟಿ ಅನುದಾನವನ್ನು ನಿಗದಿಪಡಿಸಬೇಕು. ಮತ್ತು ಇದಕ್ಕೆ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸನ್ನತಿ ಅಭಿವೃದ್ಧಿ ಮಂಡಳಿಯನ್ನು ಪುನಶ್ಚೇತನಗೋಳಿಸುವುದರ ಜೊತೆಗೆ ಪ್ರತಿ ವರ್ಷ ಫೆಬ್ರುವರಿ-12 ರಂದು ಸಾಮ್ರಾಟ್ ಅಶೋಕ ಸನ್ನತಿ ಉತ್ಸವವನ್ನು ಸರಕಾರದ ವತಿಯಿಂದ ಆಚರಣೆ ಮಾಡಬೇಕು” ಎಂದು ತಿಳಿಸಿದರು.
ಕರ್ನಾಟಕದ ಬೌದ್ಧ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಈ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯದಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಪ್ರಾರಂಭಿಸಬೇಕು. ಮತ್ತು ಅದಕ್ಕಾಗಿಯೇ ಕನಿಷ್ಠ 1000 ಕೋಟಿ ಅನುದಾನವನ್ನು ಮೀಸಲಿಡಬೇಕು. ಭಗವಾನ್ ಬುದ್ಧರ ಜಯಂತಿ ಬುದ್ಧ ಪೂರ್ಣಿಮಾ ದಿನದಂದು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

“ರಾಜ್ಯದ ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬುದ್ದ ವಿಹಾರ ನಿರ್ಮಾಣ ಮಾಡಲು ಕನಿಷ್ಠ 5 ರಿಂದ 10 ಎಕರೆ ಜಮೀನು ಕಾಯ್ದಿರಿಸಬೇಕು. ಆಸಕ್ತ ಬೌದ್ಧ ಸಂಘ ಸಂಸ್ಥೆಗಳಿಗೆ ಭೂ ಮಂಜೂರಾತಿ ನೀಡಬೇಕು. ಮತ್ತು ಅಗತ್ಯವಾದ ಕಟ್ಟಡ ಇತರೆ ಅಭಿವೃದ್ಧಿ ಸೌಲಭ್ಯಕ್ಕಾಗಿ ಅನುದಾನವನ್ನು ಒದಗಿಸಬೇಕು” ಎಂದು ಮನವಿ ಮಾಡಿದರು.
“ಕರ್ನಾಟಕ ರಾಜ್ಯದಲ್ಲಿ ದೊರೆತಿರುವ ಸಾಮ್ರಾಟ್ ಅಶೋಕರ ಎಲ್ಲ ಸ್ಥಳಗಳ ಶಿಲಾ ಶಾಸನಗಳನ್ನು ಸಂರಕ್ಷಿಸಲು ಮತ್ತು ಹೆಚ್ಚಿನ ಅಭಿವೃದ್ಧಿ ಪಡಿಸಲು ವಿಶೇಷ ಯೋಜನೆ ರೂಪಿಸಬೇಕು” ಎಂದು ತಾಕೀತು ಮಾಡಿದರು.
ಯಾದಗಿರಿ ಜಿಲ್ಲೆಯ ಶಹಾಪುರದ ವಿಶ್ವ ವಿಖ್ಯಾತ ಬುದ್ದ ಮಲಗಿದ ಬೆಟ್ಟದ ಸಗರಾದ್ರಿ ಪಾರಂಪರಿಕ ತಾಣ ಮತ್ತು ಪರಿಸರ ಸಂರಕ್ಷಣ ಉದ್ಯಾನವನದ ಥೀಮ್ ಪಾರ್ಕ್ ಯೋಜನೆಗೆ 50 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಬೇಕು, 70 ದಿನಗಳ ಸನ್ನತಿ ಪಾದಯಾತ್ರೆ ಸುಮಾರು 1000 ಕಿ.ಮೀ. ಸಂಚರಿಸಿ ಈ ಯಾತ್ರೆಯಲ್ಲಿ ಸಾಮ್ರಾಟ್ ಅಶೋಕರ 09 ಐತಿಹಾಸಿಕ ಸ್ಥಳಗಳ ವೀಕ್ಷಣೆ ಮತ್ತು ಅಧ್ಯಯನ ಮಾಡಿ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಲು ಈ ಒಂದು ಪಂಚಶೀಲ ಪಾದಯಾತ್ರೆ ಮಾಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಬೆಣ್ಣುರ್, ನೀಲಕಂಠ ಬಡಿಗೇರ, ಮರೆಪ್ಪ ಚಟ್ಟೇರಕರ್, ಸೂರ್ಯಕಾಂತ ನಿಬಳಕರ್ ಮಾತನಾಡಿದರು. ವೇದಿಕೆಯಲ್ಲಿ ಭೋದಿ ದತ್ತ, ದಮ್ಮನಂದ, ವರ ಜೋತಿ, ಜ್ಞಾನ ಸಾಗರ್, ದಮ್ಮ ದೀಪ್, ಉಪಸ್ಥಿತರಿದ್ದರು. ರಾಹುಲ್ ಹುಲಿಮನಿ ನಿರೂಪಿಸಿದರು, ಭಾಗಪ್ಪ ಯಾದಗಿರಿ ಸ್ವಾಗತ, ಸೈಬಣ್ಣ ಬನ್ನಟ್ಟಿ ವಂದಿಸಿದರು.

ಈ ಸಂದರ್ಭದಲ್ಲಿ ಭೀಮರಾಯ ಸುರಪುರ, ಶರಣು ನಾಟ್ಟೇಕರ್, ಶಿವಶಂಕರ್ ಹೊಸಮನಿ, ನಾಗಣ್ಣ ಕಲ್ಲದ್ದೇವನಹಳ್ಳಿ, ಮಲ್ಲಣ್ಣ ಮಸ್ಕಿ, ಬಾಬು ಮದ್ರೀಕಿ, ರಾಹುಲ್ ಖಂಡಾರೆ, ಮಲ್ಲೇಶಿ, ನಿಂಬುರೆ, ಸೋನ್ ಕಾಂಬಳೆ, ಸೋಮಶೇಖರ್, ಸುರೇಶ್ ಕಾನೆಕರ್ ಇನ್ನಿತರರು ಇದ್ದರು.
ನಂತರ ವಿಶೇಷ ಮೆರವಣಿಗೆ ಸಾಮ್ರಾಟ್ ಅಶೋಕರ ಮಗಳಾದ ಸಂಘಮಿತ್ರ ಮಹಾಥೇರಿ ರವರು ಭಗವಾನ್ ಬುದ್ಧರ ಅಸ್ಥಿ [ಧಾತುಗಳ] ಶ್ರೀಲಂಕಕ್ಕೆ ಹಸ್ತಾಂತರಿಸಿದ್ದರಲ್ಲಿ ಒಂದನ್ನು ಭಾರತಕ್ಕೆ ತಂದಿರುವ ಬುದ್ಧರ ಪವಿತ್ರ ಅಸ್ಥಿಯ ಪುಣ್ಯ ಮೆರವಣೆಗೆ ಪಂಚಶೀಲ ದಮ್ಮ ಪಾದಯಾತ್ರೆ ಬೌದ್ಧ ಐತಿಹಾಸಿಕ ಸ್ಥಳ ಸನ್ನತಿ ವತಿಯಿಂದ ಪಾದಯಾತ್ರೆ ಪ್ರಾರಂಭಗೊಂಡಿದ್ದು, ತಾಲೂಕಿನ ಹುರಸಗುಂಡಗಿ ಗ್ರಾಮದ ವರೆಗೆ ಪಾದಯಾತ್ರೆ ವಿಜೃಂಭಣೆಯಿಂದ ಜರುಗಿತ್ತು ಐದನೊರಕ್ಕು ಹೆಚ್ಚು ಬೌದ್ಧ ಧರ್ಮದ ಅನುಯಾಯಿಗಳು ದಮ್ಮ ಪಂಚಶೀಲ ಪಾದಯಾತ್ರೆಯಲ್ಲಿ ಭಾಗವಹಿಸಿದರು.
