ಕಲಬುರಗಿಯ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಕೈದಿಗೆ ಇಲ್ಲಿನ 2ನೇ ಕೆಎಂಎಫ್‌ಸಿ ನ್ಯಾಯಾಲಯ 1 ವರ್ಷ 5 ತಿಂಗಳು ಕಾರಾಗೃಹ ಶಿಕ್ಷೆ ಮತ್ತು 500 ರೂಪಾಯಿ ದಂಡ ವಿಧಿಸಿದೆ.
ರಮೇಶ ಶಿಕ್ಷೆಗೆ ಒಳಗಾದ ವ್ಯಕ್ತಿ. ಪರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಕೇಂದ್ರ ಕಾರಾಗೃಹದ ಹೊರ ತೋಟದಲ್ಲಿ 2021ರ ಜನವರಿ 4 ರಂದು ಬೆಳಿಗ್ಗೆ ಬೆಂಗಾವಲಿನಲ್ಲಿ ಕೆಲಸಕ್ಕೆಂದು ಕರೆದುಕೊಂಡು ಹೋದಾಗ ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ಪರಾರಿಯಾಗಿದ್ದನು.
ಈ ಸಂಬಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತನಿಖಾಧಿಕಾರಿ ಥಾವರು ಚವ್ಹಾಣ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿದ ಕಲಬುರಗಿಯ 2ನೇ ಕೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸ್ಮೀತಾ ನಗಲಾಪೂರ ಅವರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಬಾಬಾಸಾಬ ಕೆ. ಅವರು ವಾದ ಮಂಡಿಸಿದ್ದರು.