ಮಣಿಪುರ ಹಿಂಸಾಚಾರ ತಡೆಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಕಾನೂನು ಸುವ್ಯವಸ್ಥೆ ಇರಬೇಕಾದ ನಾಗರಿಕ ಸಮಾಜದಲ್ಲಿ ಇಂತಹ ಕ್ರೂರ ಘಟನೆಗಳು ನಡೆಯಬಾರದು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಆಳುವವರು ವಿಫಲರಾಗಿದ್ದಾರೆ. ಮಣಿಪುರ ಹಿಂಸಾಚಾರವನ್ನು ಕೂಡಲೇ ತಡೆಯಬೇಕು ಒಂದು ಒತ್ತಾಯಿಸಿ ನಾನಾ ಪಕ್ಷಗಳು ಹಾಗೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆಯನ್ನು ಖಂಡಿಸಿದರು. ಮಣಿಪುರದಲ್ಲಿ ಕಳೆದ 2 ತಿಂಗಳಿನಿಂದ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿದೆ. ಮಹಿಳೆಯರು ಅತ್ಯಚಾರಕ್ಕೊಳಾಗಿ ಮಕ್ಕಳು ಅನಾಥರಾಗುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಮಣಿಪುರದಲ್ಲಿ ಶಾಂತಿ ಸ್ಥಾಪನೆಗಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಮಹಿಳೆಯರ ಬಗ್ಗೆ ಮಾತನಾಡುತ್ತಿರುವ ಕೇಂದ್ರ-ರಾಜ್ಯ ಸರ್ಕಾರಗಳು ಅಲ್ಲಿನ ಮಹಿಳೆಯರನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸ್ವಾತಂತ್ರ್ಯ ಪೂರ್ವದಿಂದ ಈವರೆಗೆ ಮಹಿಳೆಯ ಸಮಾನ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದೆವು. ಆದರೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಇನ್ನೂ ಮಹಿಳೆಯರಿಗೆ ರಕ್ಷಣೆಯೇ ಸಿಕ್ಕಿಲ್ಲ ಎಂಬುದು ನಮಗೆ ಗೊತ್ತಾಗಿದೆ. ಬಿಲ್ಕಿಸ್ ಬಾನು ಪ್ರಕರಣವಾದಾಗ, ಹತ್ರಾಸ್ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದಾಗ, ಮಹಿಳಾ ಕುಸ್ತಿಪಟುಗಳ ದೌರ್ಜನ್ಯ ನಡೆದಾಗ ನಮ್ಮ ದೇಶದ ಪ್ರಧಾನಮಂತ್ರಿ ಮಾತನಾಡಿದ್ದರೆ ಇಂದು ಇಂತಹ ಕೃತ್ಯ ಎಸಗಲು ದುಷ್ಟರು ಯೋಚಿಸುತ್ತಿದ್ದರು” ಎಂದು ಹೇಳಿದ್ದಾರೆ
“ಸಾಮೂಹಿಕ ಅತ್ಯಾಚಾರಕ್ಕೆ ಅಲ್ಲಿನ ಪೊಲೀಸರು ಪರೋಕ್ಷ ಬೆಂಬಲ ನೀಡಿದ್ದಾರೆ. ಮಣಿಪುರ ರಾಜ್ಯದಲ್ಲಿ ಇಂಟರ್‌ನೆಟ್ ಕಡಿತಗೊಳಿಸಿ ಅತ್ಯಾಚಾರ, ಹತ್ಯೆಗಳು, ಮಹಿಳೆಯರ ಬೆತ್ತಲೆ ಮೆರವಣಿಗೆಗಳಿಗೆ ಅಲ್ಲಿನ ಬಿಜೆಪಿ ಸರ್ಕಾರ ಕುಮ್ಮಕ್ಕು ನೀಡುವ ಮೂಲಕ ಅಲ್ಲಿ ಹಿಂಸಾಚಾರ ನಡೆಸಲು ಪರೋಕ್ಷ ಬೆಂಬಲ ನೀಡುತ್ತಿದೆ” ಎಂದು ಆರೋಪಿಸಿದರು.
“ಮಹಿಳೆಯರ ಮೇಲಿನ ಅತ್ಯಾಚಾರ ಘಟನೆ ನಡೆದು 2 ತಿಂಗಳಾದರೂ ಮಾತನಾಡದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯತನವನ್ನು ತೋರಿಸಿರುವುದು ಸರಿಯಾದ ಕ್ರಮವಲ್ಲ. ಸಾರ್ವಜನಿಕರ ರಕ್ಷಣೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ , ಮೀನಾಕ್ಷಿ ಬಾಳಿ, ಮರೆಪ್ಪ ಹಳ್ಳಿ,ಭೀಮಶೆಟ್ಟಿ ಯಂಪಳಿ, ಸಾಯಿಬಣ್ಣ ಗುಡುಬಾ,ಮಲ್ಲಮ್ಮ, ಸುಭಾಷ್ ಹೋಸಮನಿ , ರಾಯಪ್ಪ ಹುರಮುಂಜಿ, ದಿಲೀಪ್ ಕುಮಾರ್ ನಾಗೂರೆ, ಕಾಶಿನಾಥ್ ಬಂಡಿ,ಜಾವೇದ್ ಹುಸೈನ್ , ನಾಗಯ್ಯಾ ಸ್ವಾಮಿ ಮೇಘರಾಜ ಕಠಾರೆ, ಸಿದ್ದು ಹರವಾಳ ಶೇಖಮ ಕುರಿ, ಮರೆಪ್ಪ ಚಟ್ಟೆರಕೇರಾ, ಡಾ.ಮಹೇಶಕುಮಾರ್ ಇನ್ನಿತರರು ಉಪಸ್ಥಿತರಿದ್ದರು.