ಅತಿಥಿ ಉಪನ್ಯಾಸಕರ ಸೇವಾ ಖಾಯಂಮಾತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 21 ದಿನಕ್ಕೆ ಕಾಲಿಟ್ಟಿದ್ದು ಇಂದು (ಡಿ.13) ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅತಿಥಿ ಉಪನ್ಯಾಸಕರೆಲ್ಲರೂ ಪೊರಕೆ ಹಿಡಿದು ಕಸ ಗುಡಿಸುವುದರ ಮೂಲ ಪ್ರತಿಭಟನೆ ಮಾಡಿದ್ದಾರೆ.
ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಸದ್ಯದ ಕಾರ್ಯನಿರತ ಹುದ್ದೆಗಳಿಗೆ ವಿರುದ್ಧವಾಗಿ ಹೊಸ ಹುದ್ದೆಗಳನ್ನು ಸೃಜಿಸಿ, ಸೇರ್ಪಡೆ ಹಾಗೂ ಕಾನೂನು ತಿದ್ದುಪಡಿ ಮಾಡಿಕೊಂಡು ಅನುಮೋದನೆ ನೀಡಿ, ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೃಜಿಸಿದ ಹುದ್ದೆಗಳಲ್ಲಿ ವಿಲೀನಗೊಳಿಸಿ ಸಕ್ರಮಾತಿ ಮಾಡುವ ಬಗ್ಗೆ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾತನಾಡಿ, ನಮ್ಮ ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 11,000ಕ್ಕಿಂತ ಅಧಿಕ ಅತಿಥಿ ಉಪನ್ಯಾಸಕರು, ಹತ್ತಾರು ವರ್ಷಗಳಿಂದ ಅತ್ಯಂತ ಕಡಿಮೆ ಗೌರವ ಭತ್ಯೆ ಪಡೆದು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ವಯೋಮಿತಿ ಮೀರಿದ ಮತ್ತು ಮೀರುತ್ತಿರುವವರು ಇದ್ದಾರೆ. ಈಗ ಅತಿಥಿ ಉಪನ್ಯಾಸಕರಿಗೆ ಸೇವಾ ಖಾಯಮಾತಿ ಇಲ್ಲದೆ ನಮ್ಮೆಲ್ಲರ ಬದುಕು ಅಭದ್ರತೆಯಲ್ಲಿದೆ.
ಅತಿಥಿ ಉಪನ್ಯಾಸಕ, ತಾತ್ಕಾಲಿಕ ಎಂಬುದು ಅವೈಜ್ಞಾನಿಕ ಪದ್ಧತಿ ಉನ್ನತ ಶಿಕ್ಷಣ ವ್ಯವಸ್ಥೆಗೆ ಮತ್ತು ಕಾಲೇಜುಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ವೃತ್ತಿಯಲ್ಲಿ ಸಾಕಷ್ಟು ಪ್ರತಿಭಾವಂತ, ಅರ್ಹರು ಮತ್ತು ಬೋಧನಾ ಕೌಶಲ್ಯವುಳ್ಳ ಅಭ್ಯರ್ಥಿಗಳು ಇದ್ದರೂ ಸಹ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಶೈಕ್ಷಣಿಕ ಚಟುವಟಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಜೊತೆಗೆ ಅತ್ಯಂತ ಕಡಿಮೆ ವೇತನ ಸಮಯಕ್ಕೆ ಸರಿಯಾಗಿ ಗೌರವಧನ ಪಾವತಿಯಾಗದಿರುವುದು. ವರ್ಷಪೂರ್ತಿ ಕೆಲಸ ಸಿಗದಿರುವುದು ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರತಿನಿತ್ಯ ಆತಂಕದ ಹಾಗೂ ಅಭದ್ರತೆಯ ಪರಿಸ್ಥಿತಿಯಲ್ಲಿ ಬದುಕುವಂತೆ ಮಾಡಿದೆ.
ಸರ್ಕಾರ ಈ ಹಿಂದೆ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು, ಅರೆಕಾಲಿಕ, ಅತಿಥಿ ಉಪನ್ಯಾಸಕರನ್ನು ಜೆ.ಒ.ಸಿ ಸೇವೆ ಸಲ್ಲಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು, ಮುರಾರ್ಜಿ ದೇಸಾಯಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ದಿನಗೂಲಿ ವೈದ್ಯರುಗಳನ್ನು ಅರೆ ವೈದ್ಯಕೀಯ ಸಿಬ್ಬಂದಿವರ್ಗ ಮತ್ತು ವಾಹನ ಚಾಲಕರನ್ನು ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರರಿಗೆ ಖಾಯಂಮಾತಿ ನೀಡಲು ತೆಗೆದುಕೊಂಡ ದೃಢ ನಿರ್ಧಾರವನ್ನು ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ವಿಷಯದಲ್ಲೂ ಕೂಡ ತೆಗೆದುಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.