ಆಹಾರ ಪಡಿತರ ಚೀಟಿ ಪಡೆಯಲು ರಾಜ್ಯದ ಬಡ ಜನರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲು ಆಗ್ರಹಿಸಿ ಹಾಗೂ ನೈಜ ಫಲಾನುಭವಿಗಳನ್ನು ಹೊಸ ಪಡಿತರ ಚೀಟಿ ನೀಡುವುದಕ್ಕೆ ಇರುವ ಮಾನದಂಡಗಳನ್ನು ಸರಳೀಕರಿಸಲು ಒತ್ತಾಯಿಸಿ ಕಲಬುರಗಿಯಲ್ಲಿ ಸ್ಲಂ ಜನಾಂದೋಲನ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಸಂಘಟನೆಯ ವತಿಯಿಂದ ಕಲುಬರಗಿ ಜಿಲ್ಲಾಧಿಕಾರಿಗಳ ಮುಖಾಂತರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ.ಹೆಚ್.ಮುನಿಯಪ್ಪನವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ ಮಾತನಾಡಿ, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಚುನಾವಣೆಯಲ್ಲಿ ಘೋಷಿಸಿರುವಂತಹ ಐದು ಗ್ಯಾರಂಟಿಗಳಾದ ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ, ಶಕ್ತಿ ಯೋಜನೆ. ಅನ್ನಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ. ಆದರೆ ಈ ಯೋಜನೆಗಳನ್ನು ಪಡೆಯಲು ಲಕ್ಷಾಂತರ ಜನ ಅರ್ಜಿ ಸಲ್ಲಿಕೆ ಮಾಡಲು ಸರದಿ ಸಾಲಿನಲ್ಲಿ ನಿಲ್ಲಿಸಲಾಗುತ್ತಿದೆ. ನೈಜ ಬಡಜನರು ಹೊಸ ಪಡಿತರ ಚೀಟಿಗಳನ್ನು ಮಾಡಿದುಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ತಿಳಿಸಿದರು.
ಸರ್ಕಾರ ಅರ್ಜಿ ಸಲ್ಲಿಸಲು ನೀಡಿತ್ತಿರುವ ಸಮಯ ತುಂಬಾ ಕಡಿಮೆ ಆಗಿದ್ದರಿಂದ ಸಾವಿರಾರು ಜನರಲ್ಲಿ ಕೇವಲ 4-5 ಜನರ ಮಾತ್ರ ಆನ್ ಲೈನನಲ್ಲಿ ಅರ್ಜಿಗಳು ಸಲ್ಲಿಕೆ ಆಗುತ್ತಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ತಮ್ಮ ದಿನನಿತ್ಯದ ಕೆಲಸಗಳನ್ನು ಬಿಟ್ಟು ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ರಾಜ್ಯದಲ್ಲಿ 1.15 ಕೋಟಿ ಕುಟುಂಬಗಳು ಅಂದರೆ ನಮ್ಮ ರಾಜ್ಯದ ಜನಸಂಖ್ಯೆ ಶೇ70%ಕ್ಕಿಂತಲೂ ಹೆಚ್ಚು ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಈ ಸೌಲಭ್ಯಗಳು ದುರ್ಬಳಕ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂಬ ಕಾರಣದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಕ್ಷಾಂತರ ಪಡಿತರ ಚೀಟಿಗಳನ್ನು ರದ್ದುಗೊಳಿಸುತ್ತಿರುವ ಸರ್ಕಾರದ ಕ್ರಮವನ್ನು ಸ್ಲಂ ಜನಾಂದೋಲನ-ಕರ್ನಾಟಕ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈಗಾಗಲೇ ರಾಜ್ಯದಲ್ಲಿ ಸಾವಿರಾರು ಕುಟುಂಬಗಳು ತಮ್ಮ ಪಡಿತರ ಚೀಟಿಗಳಲ್ಲಿ ತಿದ್ದುಪಡಿ ಹಾಗೂ ಸೇರ್ಪಡೆ ಪ್ರಕ್ರಿಯೆ ಮಾಡಿ ಸುಮಾರು ತಿಂಗಳಾದರು ಸಹ ಆಹಾರ ಇಲಾಖೆಯಲ್ಲಿ ತಿದ್ದುಪಡಿ ಹಾಗೂ ಸೇರ್ಪಡೆಗೊಂಡ ಹೊಸ ಪಡಿತರ ಚೀಟಿಗಳನ್ನು ನೀಡುವಲ್ಲಿ ವಿಳಂಭ ನೀತಿಯನ್ನು ಅನುಸರಿಸಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಹೊಸ ಪಡಿತರ ಚೀಟಿಗಳನ್ನು ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಲು ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕು ಹಾಗೂ ತಿದ್ದುಪಡಿ ಮತ್ತು ಸೇರ್ಪಡೆ ಮಾಡಿಕೊಂಡಿರುವ ಪಡಿತರ ಚೀಟಿಗಳನ್ನು ಕೊಡಲೇ ಫಲಾನುಭವಿಗಳಿಗೆ ವಿತರಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಸ್ಲಂ ಜನಾಂದೋಲನ- ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಗೌರಮ್ಮ ಮಾಕಾ, ಅಶ್ವಿನಿ ಮದನಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


