ಸಿಯುಕೆಯಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ನಡೆದರೆ ಅದನ್ನು ಕಾನೂನು ಅಡಿಯಲ್ಲಿ ಪ್ರಶ್ನಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯ ಕಡಗಂಚಿಯ ಕೇಂದ್ರೀಯ ವಿಶ್ವ ವಿದ್ಯಾಲಯ ಸಭಾಂಗಣದಲ್ಲಿ ಎಸ್‌ಸಿ, ಎಸ್‌ಟಿ ನೌಕರರ ಕಲ್ಯಾಣ ಸಂಘ ಏರ್ಪಡಿಸಿದ್ದ ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಸಂವಿಧಾನದ ತತ್ವಗಳು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯವು ಕಲಬುರಗಿಗೆ ಬರಲು ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಪರಿಶ್ರಮ ಅಪರಿಮಿತವಾಗಿದೆ. ಅವರು ನಡೆಸಿದ ಹೋರಾಟ ಕಣ್ಣ ಮುಂದಿದೆ. ಆದರೆ ಇಲ್ಲಿನ ಪರಿಸ್ಥಿತಿ ಗಮನಿಸಿದರೆ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದಿಲ್ಲ. ಇದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ.
ವಿಚಾರ ಸಂಕಿರಣ ಏರ್ಪಡಿಸಲು ವಿವಿಯ ಕುಲಸಚಿವರು ಷರತ್ತು ಹಾಕಿದ್ದರು. ಶೈಕ್ಷಣಿಕ ಸಮಗ್ರತೆಗೆ ಧಕ್ಕೆ ತರದಂತೆ ಕಾರ್ಯಕ್ರಮ ನಡೆಸಬೇಕೆನ್ನುವವರು, ಈ ಕಾರ್ಯಕ್ರಮದಲ್ಲಿ ಜನರಿಂದ ಆಯ್ಕೆಯಾದ ಈ ಕ್ಷೇತ್ರದ ಶಾಸಕರು ಹಾಗೂ ಸರ್ಕಾರದ ಭಾಗವಾಗಿರುವ ನಾನು ಭಾಗವಹಿಸುವ ಕಾರ್ಯಕ್ರಮಕ್ಕೆ ಇಷ್ಟೊಂದು ಷರತ್ತು ಹಾಗೂ ಪೊಲೀಸ್ ಭದ್ರತೆ ಹಾಕುವ ಅವಶ್ಯಕತೆ ಏನಿತ್ತು? ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ವಿ.ವಿ. ಕುಲಪತಿಗೆ ಅಥವಾ ರಿಜಿಸ್ಟ್ರಾರ್‌ಗೆ ಪತ್ರ ಬರೆಯಲು ತಿಳಿಸಿದರು ಎಂದರು.
ಸಿಯುಕೆಯಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ನಡೆದರೆ ಅದನ್ನು ಕಾನೂನು ಅಡಿಯಲ್ಲಿ ಪ್ರಶ್ನಿಸಿ ನಾನು ನಿಮ್ಮೊಂದಿಗೆ ಇರುತ್ತೇನೆ. ನಾನು ವಿಶ್ವ ವಿದ್ಯಾಲಕ್ಕೆ ಬರದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.