ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೊಳಗಾದ ಆರೋಪಿಗಳನ್ನು ಬಿಡಿಸಲು ಖುದ್ದು ಬಿಜೆಪಿಯ ಹಾಲಿ ಶಾಸಕರೊಬ್ಬರು ಕರೆ ಮಾಡಿದ್ದರು. ಆದರೆ, ಈಗ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವ ಮುನ್ನ ಬಿಜೆಪಿ ನಾಯಕರು ಹೋಂವರ್ಕ್ ಮಾಡಿಕೊಂಡು ಬರಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾದ್ಯಮಗಳೊಂದಿಗೆ ಅವರು ಮಾತನಾಡಿದರು. “ಆರ್.ಡಿ ಪಾಟೀಲ್ ಇರಲಿ ಬೇರೆ ಯಾರೇ ಇರಲಿ, ತಪ್ಪು ಮಾಡಿದವರನ್ನು ಕಾಂಗ್ರೆಸ್ ಸರ್ಕಾರ ಬಿಡುವುದಿಲ್ಲ. ಕಳೆದ ನಾಲ್ಕು ದಿನಗಳಲ್ಲಿ ಅಕ್ರಮದಲ್ಲಿ ಭಾಗಿಯಾದ 20ಕ್ಕೂ ಅಧಿಕ ಜನರನ್ನು ಬಂಧಿಸಿದ್ದೇವೆ. ಆರ್.ಡಿ. ಪಾಟೀಲ್ ಅವರನ್ನು ಕೂಡಾ ಶೀಘ್ರವೇ ಬಂಧಿಸುತ್ತೇವೆ. ಆರ್ಡಿಪಿ ಇರುವ ಸ್ಥಳದ ಮಾಹಿತಿ ಸಿಕ್ಕಿದೆ ಕೂಡಲೇ ಬಂಧಿಸಲಾಗುವುದು. ಪೊಲೀಸ್ ಅಧಿಕಾರಿಗಳು ಆರೋಪಿ ಬಂಧನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೂ ಆರ್.ಡಿ. ಪಾಟೀಲ್ ತಪ್ಪಿಸಿಕೊಂಡಿದ್ದಾರೆ. ಅಧಿಕಾರಿಗಳ ಪಾತ್ರ ಇದ್ದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.
“ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಪ್ರಥಮ ಬಾರಿಗೆ ಇಷ್ಟು ಬಿಗಿ ಭದ್ರತೆ ನಡುವೆ ಪ್ರಾಮಾಣಿಕ ಪರೀಕ್ಷೆ ನಡೆಸಿದ್ದೇವೆ. ಹ್ಯಾಂಡ್ ವೈಡ್ ಡಿವೈಸರ್ ಅಳವಡಿಕೆ, 800 ಮೀಟರ್ನಲ್ಲಿನ ಲಾಡ್ಜ್ಗಳ ಪರಿಶೀಲನೆ. ವಾಹನ ಪಾರ್ಕಿಂಗ್ ತಪಾಸಣೆ ಸೇರಿ ಹತ್ತು ಹಲವಾರು ಮುಂಜಾಗ್ರತಾ ಕ್ರಮ ಜರುಗಿಸಿದ್ದು, ಇದೆ ಪ್ರಥಮ ಬಾರಿ. ಬಿಜೆಪಿ ಸರ್ಕಾರದಲ್ಲಿ ಪಿಎಸ್ಐ ಅಕ್ರಮ ನಡೆದಾಗ ಸದನದಲ್ಲಿ ಅಕ್ರಮ ನಡೆದಿಲ್ಲ ಎಂದರು. ಮುಖ್ಯಮಂತ್ರಿ ಗೃಹಮಂತ್ರಿಗಳಿಗೆ ಭೇಟಿಯಾಗಲು ಅಭ್ಯರ್ಥಿಗಳು ಚಪ್ಪಲಿ ಹರಿದುಕೊಂಡು ಸುಸ್ತಾದ ಬಳಿಕ, ಏಳು ತಿಂಗಳ ನಂತರ ಅಕ್ರಮದ ಬಗ್ಗೆ ಒಪ್ಪಿಕೊಂಡರು” ಎಂದು ಹೇಳಿದ್ದಾರೆ.
ಆದರೆ, ನಾವು ಕೇವಲ 24 ತಾಸಿನಲ್ಲಿ ಆರೋಪಿಗಳನ್ನು ಬಂಧನ ಮಾಡಿದ್ದೇವೆ. ಮುಂಜಾಗ್ರತಾ ಕ್ರಮ ಜರುಗಿಸಿ ಸುಮ್ಮನೆ ಕುಳಿತಿಲ್ಲ, ಅಕ್ರಮ ನಡೆದಾಗ ಶೀಘ್ರವೇ ಕ್ರಮ ಕೈಗೊಂಡು ಅಕ್ರಮದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸುತ್ತೇವೆ. ಅಕ್ರಮದ ಕುರಿತಾಗಿ ಸಿಎಂ ಹೋಂ ಮಿನಿಸ್ಟರ್ ಎಲ್ಲರೂ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅವರಂತೆ ಮೈಮೇಲೆ ಎಣ್ಣೆ ಹಾಕಿಕೊಂಡು ಕುಳಿತಿಲ್ಲ. ನಮ್ಮ ಜವಾಬ್ದಾರಿ ನಾವು ನಿಭಾಯಿಸುತ್ತಿದ್ದೇವೆ. ಏನಾದರೂ ಮಾಹಿತಿ ಇದ್ದರೆ ಕೊಡಲಿ. ಅದನ್ನು ಬಿಟ್ಟು ಬಿಜೆಪಿ ಅವರು ಕೇವಲ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.