ಶಿಕ್ಷಣ ಪ್ರತೀ ಮಗುವಿನ ಸಾಂವಿಧಾನಿಕ ಹಾಗೂ ಮಾನವ ಹಕ್ಕು. ಸರ್ಕಾರಿ ಶಾಲೆಗಳನ್ನು ಬಲಪಡಿಸಿ, ಉತ್ತಮ ಶಿಕ್ಷಣ ನೀಡಬೇಕೆಂದು ಆಗ್ರಹಿಸಿ ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆ (ಎಸ್‌ಎಸ್‌ಎ) ಕಲಬುರಗಿಯ ಮಿನಿ ವಿಧಾನಸೌಧ ಎದುರು ಅಹೋರಾತ್ರಿ ಸತ್ಯಾಗ್ರಹ ನಡೆಸಿದೆ.
ಸಾವಿರಾರು ವರ್ಷಗಳಿಂದ ನಾವು ಪಟ್ಟಿರುವ ಕಷ್ಟ ನಮ್ಮ ಮಕ್ಕಳು ಪಡಬಾರದೆಂಬುದು ಮುಖ್ಯ ಉದ್ದೇಶವನ್ನಿಟ್ಟುಕೊಂಡು ಈ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದೇವೆ. ತುರ್ತಾಗಿ ಹೋರಾಟ ನಡೆಸಲು ಕಾರಣ, ಕಲ್ಯಾಣ ಕರ್ನಾಟಕದ ವಿಭಾಗದ ಶಾಲೆಗಳಲ್ಲಿ 12.5ಲಕ್ಷ ಮಕ್ಕಳ ಸಂಖ್ಯೆ ಇದೆ. ಆದರೆ, ಶಾಲೆಗಳಲ್ಲಿ ಶೇ. 40ರಷ್ಟು ಶಿಕ್ಷಕರ ಕೊರತೆ ಇದೆ. ಇದರಿಂದಾಗಿ ಈ ಒಂದು ಶೈಕ್ಷಣಿಕ ವರ್ಷದ ಅವಧಿಯಲ್ಲಿ ಮಕ್ಕಳು ತಮ್ಮ ಅತ್ಯಮೂಲ್ಯವಾದ ಜೀವನವನ್ನು ಹಾಳುಮಾಡಿಕೊಂಡಿದ್ದಾರೆ ಎಂದು ಸತ್ಯಾಗ್ರಹಿಗಳು ಹೇಳಿದ್ದಾರೆ.
ಇದಕ್ಕೆ ಪ್ರಮುಖ ಕಾರಣ ಕೇಂದ್ರ ಸರ್ಕಾರವಾಗಿದೆ. ಏಕೆಂದರೆ ಶಿಕ್ಷಣಕ್ಕಾಗಿ ಬಜೆಟ್‌ನ್ನು ಕಡಿತಗೊಳಿಸಿದ 2013-14ರ ಸಾಲಿನ ಶಿಕ್ಷಣ ಬಜೆಟ್ 0.63% ಜಿಡಿಪಿ ಆಗಿತ್ತು. ಆದರೆ, ಈ ವರ್ಷ ಅಂದರೆ 2023-24ರಲ್ಲಿ 0.37% ಜಿಡಿಪಿಗೆ ಇಳಿಕೆ ಆಗಿದೆ. ಇದೇ ಕಾರಣದಿಂದಾಗಿ ರಾಜ್ಯ ಸರ್ಕಾರದ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವು ನಮ್ಮ ಈ ಬೇಡಿಕೆಗಳನ್ನು ತಕ್ಷಣ ಬಗೆಹರಿಸುತ್ತದೆಂದು ಆಶಿಸುತ್ತೇವೆ. ಇಲ್ಲದಿದ್ದರೆ ನಮ್ಮ ಕಲ್ಯಾಣ ಕರ್ನಾಟಕದ ಜನರು ನಮ್ಮ ಶಾಂತಿಯುತವಾದ ಹೋರಾಟವನ್ನು ಎಲ್ಲಾ ಜಿಲ್ಲೆಗಳಲ್ಲಿ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಯಚೂರು, ಕೊಪ್ಪಳ, ಕಲಬುರಗಿ, ಬಳ್ಳಾರಿ, ವಿಜಯನಗರ, ಬೀದರ್, ಯಾದಗಿರಿಜಿಲ್ಲೆಯ ಕೂಲಿಕಾರ್ಮಿಕ ಹೆಣ್ಣು ಮಕ್ಕಳು, ಮೋಕ್ಷಮ, ವಿರುಪಮ್ಮ, ಶಾರಣೆಗೌಡ, ಅಕ್ಕಮಹಾದೇವಿ ಎಮ್.ಬಿ, ಕೊಟ್ರಮ್ಮ, ಸ್ವಪ್ನ, ದೀಪಾ, ಮಹಾಲಕ್ಷ್ಮಿ ಸೇರಿದಂತೆ, ಮುಖಂಡರು, ಧರಣಿಯಲ್ಲಿ ಉಪಸ್ಥಿತರಿದ್ದರು.
ಬೇಡಿಕೆಗಳು
- ತಕ್ಷಣ ಖಾಲಿಯರುವ ಶಿಕ್ಷಕರ ಹುದ್ದೆಗಳನು ಭರ್ತಿಗೊಳಿಸಬೇಕು. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 14,301 ಶಿಕ್ಷಕರ ಕೊರತೆಯಿದೆ. ಹಿರಿಯ ಪ್ರಾಥಮಿಕ / ಹೈಸ್ಕೂಲ್‌ಗಳಲ್ಲಿ 3,495 ಹುದ್ದೆಗಳು ಖಾಲಿ ಇವೆ. ಒಟ್ಟು ಸುಮಾರು 18,000 ಶಿಕ್ಷಕರ ಕೊರತೆಯಿದೆ.
- KKRDBಯು 2000 ಶಾಲೆಗಳನ್ನು ( ಕಲ್ಯಾಣ ಕರ್ನಾಟಕದಲ್ಲಿ 9247 ಶಾಲೆಗಳಿವೆ) ತೆಗೆದುಕೊಂಡು ಮಾದರಿ ಶಾಲೆಗಳನ್ನಾಗಿ ಮಾಡಬೇಕು. ಇದನ್ನು ಹೇಗೆ ಮಾಡಬೇಕೆಂದು ಸಲಹೆಗಳನ್ನು ಕೊಡಲು ಸಿದ್ಧರಾಗಿದ್ದೇವೆ.
- ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಈ ರೀತಿ ಮಾದರಿ ಮಾಡಲು ಒಂದು ವರ್ಷಕ್ಕೆ ಮಾಡಲು ರೂ.130 ಕೋಟಿಯಷ್ಟು ಖರ್ಚಾಗುತ್ತದೆ. ಇದು ಇಡೀ ದೇಶಕ್ಕೆ ಉತ್ತಮ ಮಾದರಿಯಾಗುತ್ತದೆ. ಇದು ನೇರವಾಗಿ 3 ಲಕ್ಷ ಮಕ್ಕಳ ಜೀವನವನ್ನೇ ಬದಲಾಯಿಸುತ್ತದೆ.
- Article 371(J) ಅನುಷ್ಠಾನದ ಬಗ್ಗೆ ಸಮಗ್ರ ಮಾಹಿತಿಯ ( ಶ್ವೇತ ಪತ್ರ) ಬಿಡುಗಡೆ ಮಾಡಬೇಕು. ಒಟ್ಟು ಇರುವ ಹುದ್ದೆಗಳು, ಅದರಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ, ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡತ್ತೀರಿ.
- ಹಾಗೆಯೇ ನಮ್ಮ ಕಲ್ಯಾಣ ಕರ್ನಾಟಕದ ಜನರಿಗೆ ಶೇ.8 ಮೀಸಲಾತಿಯು ಕರ್ನಾಟಕದ ಉಳಿದ 24 ಜಿಲ್ಲೆಗಳಲ್ಲಿ ಏಕೆ ದೊರೆಯುತ್ತಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಹಾಗೂ ಪರಿಹಾರ ಸರ್ಕಾರ ಕೊಡಬೇಕು.