ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ದೈಹಿಕ ಶಿಕ್ಷಣ ಶಿಕ್ಷಕ ಪ್ರಭು ಮಾಡಗಿ ಎಂಬಾತನಿಗೆ ರಕ್ಷಣೆ ನೀಡಿರುವ ಪ್ರಾಂಶುಪಾಲ ಶಿವಪುತ್ರಪ್ಪನನ್ನು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಕಲಬುರಗಿ ನಗರದಲ್ಲಿ ಪ್ರತಿಭಟನೆ ನಡೆಸುವುದರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸಿ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, “ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ನಿಲಯದ ದೈಹಿಕ ಶಿಕ್ಷಣ ಶಿಕ್ಷಕ ಪ್ರಭು ಮಾಡಗಿ ಎಂಬಾತ ವಿದ್ಯಾರ್ಥಿನಿಯರಿಗೆ ಹಲವಾರು ದಿನಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ವಿದ್ಯಾರ್ಥಿನಿಯರು ಮಹಿಳಾ ಶಿಕ್ಷಕಿಯರಿಗೆ ಈ ವಿಚಾರ ಕುರಿತು ತಿಸಿದ್ದಾರೆ. ನಂತರ ಶಿಕ್ಷಕಿಯರು ಪ್ರಾಂಶುಪಾಲ ಶಿವಪುತ್ರಪ್ಪನವರಿಗೆ ಆರೋಪಿ ಶಿಕ್ಷಕನ ವಿರುದ್ದ ದೂರು ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸದೆ ಪ್ರಕರಣಕ್ಕೆ ಕುಮುಕ್ಕು ನೀಡಿದ್ದು, ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ” ಎಂದು ಆರೋಪಿಸಿದರು.
“ಪ್ರಾಂಶುಪಾಲ ತಮ್ಮ ವಸತಿ ಗೃಹದಲ್ಲಿ ಕಸಗುಡಿಸವ, ತಟ್ಟೆ ತೊಳೆಯುವ ಕೆಲಸವನ್ನು ವಿದ್ಯಾರ್ಥಿನಿಯರ ಮೂಲಕ ಮಾಡಿಸಿಕೊಳ್ಳುತ್ತಾರೆ. ಪ್ರಾಂಶುಪಾಲನ ಸಂಬಂಧಿಕರಿಬ್ಬರು ಈ ವಸತಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಕ ರೇವಣಸಿದ್ದ ಎಂಬಾತ ಪಿಎಸ್‌ಐ ಹಗರಣದಲ್ಲಿ ಶಾಮಿಲಾಗಿದ್ದರೂ ಚಾಣಾಕ್ಷತನದಿಂದ ತಪ್ಪಿಸಿಕೊಂಡ ಕ್ರಿಮಿನಲ್ ರೂವಾರಿಯಾಗಿದ್ದಾನೆ” ಎಂದು ದೂರಿದರು.
“ಈ ಶಾಲೆ ತಮ್ಮ ಸ್ವಂತ ಆಸ್ತಿ ಎಂಬಂತೆ ವರ್ತಿಸಿ ಇಡೀ ವಸತಿ ನಿಲಯದ ವಾತಾವರಣವನ್ನೇ ಹಾಳುಗೆಡವಿದ್ದಾರೆ. ಜೇರ್ವಗಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ್ ಅವರು ಶಿವಪುತ್ರಪ್ಪ ವಸ್ತಾರಿ ಅವರ ಗ್ರಾಮದವರಾಗಿರುವುದರಿಂದ ಹಲವಾರು ಬಾರಿ ಈ ಶಾಲೆಗೆ ಅವರು ಭೇಟಿ ಕೊಟ್ಟರೂ ಕೂಡಾ ಯಾವುದೇ ಪ್ರಯೊಜನ ಆಗಿರುವುದಿಲ್ಲ” ಎಂದರು.
“ಪರಶುರಾಮ ಹಡಲಗಿ ಹೊರಗುತ್ತಿಗೆ ನೌಕರನಾಗಿ ಕಳೆದ ಇಪ್ಪತೈದು ವರ್ಷಗಳಿಂದ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ವಿರುದ್ಧ ವಿದ್ಯಾರ್ಥಿನಿಯರು ಒಂದು ಸಣ್ಣ ದೂರನ್ನೂ ನೀಡಿಲ್ಲ. ವಸತಿ ನಿಲಯದ ಅವ್ಯವಹಾರಗಳು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆ ವಿಚಾರ ಹೊರಗಡೆ ಹಾಕುತ್ತಾನೆಂದು ತಿಳಿದು ಕುಂಟು ನೆಪ್ಪ ಒಡ್ಡಿ ಕಳೆದ ಒಂದು ವರ್ಷದಿಂದ ಪರಶುರಾಮ ಎಂಬುವವರ ವಿರುದ್ಧ ಪ್ರಾಂಶುಪಾಲ ಶಿವಪುತ್ರಪ್ಪ ಇಲಾಖೆಗೆ ಹಲವು ಬಾರಿ ದೂರು ಸಲ್ಲಿಸಿದ್ದಾರೆ” ಎಂದರು.
“ತನ್ನ ಕರ್ಮಕಾಂಡ ಮುಚ್ಚಿಕೊಳ್ಳಲು ಹಲವಾರು ಪ್ರಯತ್ನ ಮಾಡಿರುದ್ದು, ವಸತಿ ಗೃಹಗಳು ಖಾಲಿ ಇದ್ದಾಗ ಹೊರಗುತ್ತಿಗೆ ನೌಕರರು ಅಲ್ಲಿ ವಾಸ್ತವ್ಯ ಹೂಡಬೇಕೆಂಬ ಸರ್ಕಾರದ ಆದೇಶವಿದ್ದರೂ ಕೂಡಾ ಪ್ರಾಂಶುಪಾಲ ಹೊರಗುತ್ತಿಗೆ ನೌಕರ ಪರಶುರಾಮನನ್ನು ಶಾಲೆಯಿಂದ ಹೊರಗೆ ಹಾಕುವ ಷಡ್ಯಂತ್ರವನ್ನು ಮಾಡುತ್ತ ಬಂದಿದ್ದಾನೆ” ಎಂದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಗುಂಡಿಗಳಿಂದ ತುಂಬಿ ಹೋದ ಆರ್ ಎನ್ ಶೆಟ್ಟಿ ರಸ್ತೆ: ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
“ವಸತಿ ಶಾಲೆಯಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ, ಪ್ರಾಂಶುಪಾಲ ಮತ್ತು ಅವರ ಸಂಬಂಧಿಕನಾದ ದೈಹಿಕ ಶಿಕ್ಷಣ ಶಿಕ್ಷಕ ಪ್ರಭು ಮಾಡಗಿ ವರ್ತನೆ ಖಂಡಿಸಿ ಹಾಗೂ ಅಲ್ಲಿನ ಅವ್ಯವಹಾರದ ಕುರಿತು ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ ಆರೋಪಿಗಳನ್ನು ಪೋಕ್ಸೊ ಕಾಯ್ದೆಯಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದರು.
ಕಾಶಿನಾಥ ಬಂಡಿ, ಮಲ್ಲಮ್ಮ ಕೊಡ್ಲಿ, ಪರಶುರಾಮ ಹಡಲಗಿ, ಬಾಬು ಹೊಸಮನಿ, ನಾಗರತ್ನ ಮದನಕರ್, ನರಸಮ್ಮ ಸೇಡಂ, ರಾಮಚಂದ್ರ ಪವಾರ, ಕಲ್ಯಾಣಿ ಪೊಜಾರಿ, ಮೇಗಾರಾಜ ಕೊಠಾರೆ ಇದ್ದರು.
