ಡಿ.ಡಿ. ಕಟ್ಟಿ ಒಂದು ವರ್ಷ ಕಳೆದರೂ ಸಹ ಹಕ್ಕು ಪತ್ರ ನೀಡುತ್ತಿಲ್ಲ ಎಂದು ಸ್ಲಂ ಜನಾಂದೋಲನ ಆಕ್ರೋಶ ಹೊರಹಾಕಿದೆ.
ಕಲಬುರಗಿ ನಗರದಲ್ಲಿ ಹಕ್ಕು ಪತ್ರ ಮತ್ತು ಸ್ಲಂ ಘೋಷಣೆ ವಿಳಂಬ ಮಾಡುತ್ತಿದ್ದರಿಂದ ಹಾಗೂ ಸ್ಲಂ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷತೆಯನ್ನು ಖಂಡಿಸಿ ಸ್ಲಂ ಜನಾಂದೋಲನ ಜಿಲ್ಲಾ ಘಟಕ, ಕಲಬುರಗಿ ವತಿಯಿಂದ ಕರ್ನಾಟಕ ಕಾರ್ಯಪಾಲಕ ಅಭಿಯಂತರರು ಕೊಳಗೇರಿ ಅಭಿವೃದ್ಧಿ ಮಂಡಳಿ,ಕಲಬುರಗಿ ಕಛೇರಿ ಎದುರುಗಡೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಧರಣಿಯನ್ನುದೇಶಿಸಿ ಜಿಲ್ಲಾ ಸಂಚಾಲಕರಾದ ರೇಣುಕಾ ಸರಡಗಿ ಮಾತನಾಡಿ, “ಹಕ್ಕು ಪತ್ರಕ್ಕಾಗಿ ಡಿ.ಡಿ ಕಟ್ಟಿ ಒಂದು ವರ್ಷ ಕಳೆದರೂ ಸಹ ಹಕ್ಕು ಪತ್ರ ನೀಡುತ್ತಿಲ್ಲ, ದಿನಾಲೂ ಒಂದಲ್ಲ ಒಂದು ನೆಪ ಹೇಳಿ, ಜನರಿಗೆ ಅಲೆದಾಡಿಸುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.

“ಸ್ಲಂ ಘೋಷಣೆ ಅರ್ಜಿ ಹಾಕಿ ಮೂರು ವರ್ಷ ಗತಿಸಿದರೂ ಸಹ ಘೋಷಣೆ ಪ್ರಕ್ರಿಯೆಯೇ ಪ್ರಾರಂಭ ಮಾಡಿಲ್ಲದ ಕಾರಣ ಹಕ್ಕು ಪತ್ರ ನೀಡುವವರೆಗೆ, ಸ್ಲಂ ಘೋಷಣೆ ಆಗುವವರೆಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ, ಕಛೇರಿ ಎದುರುಗಡೆ ನಿರಂತರ ಧರಣಿ ಸತ್ಯಗ್ರಾಹ ನಡೆಸುತ್ತೇವೆ” ಎಂದು ತಿಳಿಸಿದರು.
“ಘೋಷಿಸಿತ ಸ್ಲಂಗಳಾದ ಸಂಜುನಗರ, ಸಿದ್ದರೂಢ ನಗರ, ರಾಮನಗರ ಭಾಗ ಘೋಷಣೆ ಮಾಡಬೇಕು ” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಗೌರಮ್ಮ ಮಾಕಾ, ಶರಣಪ್ಪ ವಿದ್ಯನಗರ, ಭಾಗ್ಯವಂತ ರಾವ್ ಪಂಚಶೀಲನಗರ, ಕೆ.ಕೆನಗರ್, ಬುದ್ಧ ನಗರ, ಸಂಜು ನಗರ, ರಾಮ ನಗರ್, ಸಿದ್ದೇಶ್ವರ ಕಾಲೊನಿ, ಸಿದ್ದರೂಢ ನಗರದ ಸ್ಲಂ ನಿವಾಸಿಗಳು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
