ವಸತಿನಿಲಯಗಳಲ್ಲಿ ಸಿಬ್ಬಂದಿ ಕಡಿತಗೊಳಿಸಿರುವ ಸರ್ಕಾರದ ನೀತಿ ವಿರೋಧಿಸಿ ಮತ್ತು ಬಾಕಿ ವೇತನ ಪಾವತಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ವಸತಿನಿಲಯ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಕಲಬುರಗಿ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, “ಕರ್ನಾಟಕ ರಾಜ್ಯದಲ್ಲಿ ಸರ್ಕಾರದ ವಸತಿ ನಿಲಯಗಳು ಪ್ರಾರಂಭವಾದಾಗಿನಿಂದ 100 ಮಂದಿ ವಿದ್ಯಾರ್ಥಿಗಳಿರುವ ವಸತಿ ನಿಲಯಗಳಿಗೆ 5 ಮಂದಿ ಅಡುಗೆಗೆ, ಸ್ವಚ್ಛತಾ ಸಿಬ್ಬಂದಿ ನೇಮಿಸಲಾಗಿತ್ತು. ಆದರೆ ಈಗ ವಸತಿನಿಲಯಗಳಿಗೆ ರೊಟ್ಟಿ ಮಾಡುವ ಯಂತ್ರಗಳನ್ನು ಕೊಡುವ ನೆಪದಲ್ಲಿ 4 ಮಂದಿ ಸಿಬ್ಬಂದಿಗಳು ಇರಬೇಕೆಂಬ ಆದೇಶ ಹೊರಡಿಸಲಾಗಿದೆ. ಹೀಗಾಗಿ ರೊಟ್ಟಿ ತಿನ್ನುವ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅಡುಗೆ ಸಿಬ್ಬಂದಿಗೆ ಹೆಚ್ಚಿನ ಕೆಲಸದ ಹೊರೆಯಾಗಿ ಕೆಲಸ ಬಿಟ್ಟು ಓಡುವಂತಾಗಿದೆ” ಎಂದರು.
ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳ ನೌಕರರಿಗೆ ವೇತನಕ್ಕಾಗಿ ಸರ್ಕಾರದಿಂದ ಅನುದಾನ ಬಂದು ಒಂದು ತಿಂಗಳಾದರೂ ಎಲ್ಲ ನೌಕರರ ಬಾಕಿ ವೇತನ ಪೂರ್ತಿಯಾಗಿ ಪಾವತಿಯಾಗಿಲ್ಲ. ನೌಕರರ 6ರಿಂದ 8 ತಿಂಗಳ ವೇತನದಲ್ಲಿ 3ರಿಂದ 5 ತಿಂಗಳ ₹1000-₹1500 ಕಡಿಮೆ ವೇತನ ಪಾವತಿಸಲಾಗಿದೆ. ಅಲ್ಲದೆ ಬಿಸಿಎಂ ಇಲಾಖೆಯಲ್ಲಿಯೂ ಕೂಡ 4-6 ತಿಂಗಳ ವೇತನ ಪಾವತಿಯಾಗಿಲ್ಲ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ 2 ತಿಂಗಳ ವೇತನ ಬಾಕಿ ಇದೆ. ಕ್ರೈಸ್ಟ್ ಅಡಿಯಲ್ಲಿರುವ ವಸತಿ ನಿಲಯಗಳಲ್ಲಿ 3 ತಿಂಗಳ ವೇತನ ಬಾಕಿ ಇದೆ. ಕಾರಣ ಎಲ್ಲ ವಸತಿನಿಲಯಗಳ ನೌಕರರ ಬಾಕಿ ವೇತನ ಕೂಡಲೇ ಪಾವತಿಸಬೇಕು” ಎಂದು ಆಗ್ರಹಿಸಿದರು.
“ಕಳೆದ 3 ವರ್ಷಗಳಿಂದ ಶಾರ್ಪ್(ಸ್ವಿಸ್) ಮ್ಯಾನ್ ಪವರ್ ಏಜೆನ್ಸಿಯವರು ಕಡಿಮೆ ವೇತನ ಪಾವತಿಸಿದ್ದು, ಇಪಿಎಫ್, ಇಎಸ್‌ಐ ತುಂಬಾಲಾರದ ಬಗ್ಗೆ ತನಿಖೆ ನಡೆಸಿ ಕಾರ್ಮಿಕರಿಗೆ ವ್ಯತ್ಯಾಸದ ಹಣ ಕೊಡಿಸಬೇಕು. ಖಾಯಂ ನೌಕರರ ಸ್ಥಳದಲ್ಲಿ ಮಾತ್ರ ಖಾಯಂ ನೌಕರರನ್ನು ವರ್ಗಾವಣೆ ಮಾಡಬೇಕು. ವಾರಕ್ಕೊಂದು ರಜೆ ತಪ್ಪದೇ ಕೊಡಬೇಕು. ಹತ್ತು ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿ ಅರ್ಜಿ ಸಲ್ಲಿದ ನೌಕರರಿಗೆ ಕ್ಷೇಮಾಭಿವೃದ್ಧಿ ಯೋಜನೆಯಲ್ಲಿ ನೇಮಕ ಮಾಡಿಕೊಳ್ಳಬೇಕು. 100 ಮಂದಿ ವಿದ್ಯಾರ್ಥಿಗಳಿಗೆ 5 ಮಂದಿ ಅಡುಗೆ ಸಿಬ್ಬಂದಿ ಇರುವ ಹಿಂದಿನ ಆದೇಶ ಮುಂದುವರೆಸಬೇಕು. ವಿದ್ಯಾರ್ಥಿಗಳ ಹೆಚ್ಚಿನ ಸಂಖ್ಯೆಗನುಗುಣವಾಗಿ ಹೆಚ್ಚಿನ ಸಿಬ್ಬಂದಿ ಕೊಡಬೇಕು” ಎಂದು ಆಗ್ರಹಿಸಿದರು.
“ಹೊರಗುತ್ತಿಗೆಯಲ್ಲಿ ಮಿಸಲಾತಿ ಎಂಬುದು ಹೊಸದಾಗಿ ಮುಂದೆ ಪ್ರಾರಂಭಿಸುವ ವಸತಿನಿಲಯಗಳಲ್ಲಿ ಮಾತ್ರ ಜಾರಿಗೊಳಿಸಬೇಕು. ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಕೊಡಬೇಕು. ಕ್ರೈಸ್ ಅಡಿಯಲ್ಲಿರುವ ನೌಕರರಿಗೆ ಷರತ್ತಿನ ಚೌಂಡ ಬರೆಸಿಕೊಳ್ಳುವುದು ರದ್ದುಮಾಡಬೇಕು. ನೇರನೇಮಕಾತಿಯಿಂದ ಕೆಲಸಕಳೆದುಕೊಂಡ ನೌಕರರಿಗೆ ಸಮಾಜ ಕಲ್ಯಾಣ ಮತ್ತು ಬಿಸಿಎಂ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಖಾಲಿಯಾದ ಸ್ಥಳಗಳಲ್ಲಿ ಆದ್ಯತೆ ಕೊಟ್ಟು ನೇಮಕಾತಿ ಮಾಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ನೀಟ್-ಯುಜಿಸಿ ಪರೀಕ್ಷೆ ಭ್ರಷ್ಟಾಚಾರ ಹಗರಣ; ನ್ಯಾಯಕ್ಕಾಗಿ ಎಸ್ಎಫ್ಐ ಆಗ್ರಹ
ಸರ್ಕಾರವು ಸಿಬ್ಬಂದಿ ಕಡಿತಗೊಳಿಸಿರುವ ಅದೇಶ ಹಿಂಪಡೆಯಬೇಕು. ಜತೆಗೆ ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಬಂಡಿ, ಜಿಲ್ಲಾಧ್ಯಕ್ಷ ಪರಶುರಾಮ ಹಡಗಲ, ರಾಜ್ಯಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷ ಮೇಘರಾಜ ಕಠಾರೆ, ಅಧ್ಯಕ್ಷ ನಾಗರಾಜ ಕಟ್ಟಿಮನಿ ಸೇರಿದಂತೆ ಬಹುತೇಕರು ಇದ್ದರು.
