ದೇಶದ ಸರ್ಕಾರಿ ಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿಗಳು ಬೃಹತ್ ಹೋರಾಟವನ್ನು ಕಟ್ಟಲು ಸಜ್ಜಾಗಬೇಕು. ಒಂದೇ ಒಂದು ಸರ್ಕಾರಿ ಶಾಲೆಗಳನ್ನು ಕೂಡ ಮುಚ್ಚಲು ಬಿಡಬಾರದು. ಈ ಹೋರಾಟದ ಕೂಗನ್ನು ಪ್ರತಿ ಹಳ್ಳಿಗೂ ತೆಗೆದುಕೊಂಡು ಹೋಗಿ ಜನ ಹೋರಾಟ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆʼ ಎಂದು ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಹಣಮಂತ ಎಸ್.ಎಚ್ ಕರೆ ನೀಡಿದರು.
ಕಲಬುರಗಿಯಲ್ಲಿ ಎಐಡಿಎಸ್‌ಒ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಜಿಲ್ಲಾ ಮಟ್ಟದ ವ್ಯಕ್ತಿತ್ವ ವಿಕಸನ ಎರಡನೇ ದಿನದ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ʼನವೋದಯ ಕಾಲದ ಹರಿಕಾರರಾದ ರಾಜಾರಾಮ್ ಮೋಹನ್ ರಾಯ್, ಈಶ್ವರ್ ಚಂದ್ರ ವಿದ್ಯಾಸಾಗರ್, ಸಾವಿತ್ರಿಬಾಯಿ-ಜ್ಯೋತಿಬಾ ಫುಲೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ನೇತಾಜಿಯಂತಹ ಅನೇಕ ಮಹಾನ್ ವ್ಯಕ್ತಿಗಳು ಎಲ್ಲರಿಗೂ ಸಮಾನ ಶಿಕ್ಷಣ ಬೇಕು ಎಂದು ಧ್ವನಿ ಎತ್ತಿದರುʼ ಎಂದು ತಿಳಿಸಿದರು.
ʼಶಿಕ್ಷಣವು ಹುಟ್ಟಿದ ಪ್ರತಿಯೊಂದು ಮಗುವಿಗೂ ಮೂಲಭೂತ ಹಕ್ಕಾಗಬೇಕು ಎಂದು ಅನೇಕ ಹೋರಾಟಗಳನ್ನು ರೂಪಿಸಿದರು. ಆದರೆ ಸ್ವಾತಂತ್ರ್ಯ ನಂತರದ ಭಾರತದಲ್ಲಿ ಅಧಿಕಾರಕ್ಕೆ ಬಂದಿರುವ ಎಲ್ಲಾ ಸರ್ಕಾರಗಳು ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರದ ವಸ್ತುವನ್ನಾಗಿಸಿದೆ. ಮಾಹಿತಿ ಸಂಗ್ರಹಣೆಗೆ ಹಾಗೂ ಪ್ರಮಾಣ ಪತ್ರಕ್ಕೆ ಮೀಸಲೆಂಬುವಂತೆ ಮಾಡಿವೆ. ಕೇಂದ್ರ ಬಿಜೆಪಿ ಸರ್ಕಾರವು ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರಿಕರಣ ಮಾಡುವ ಎನ್ಇಪಿ ಶಿಕ್ಷಣ ಪದ್ಧತಿಯನ್ನು ಜಾರಿ ಮಾಡಿತುʼ ಎಂದು ಹೇಳಿದರು.
ʼಕರ್ನಾಟಕ ಸರ್ಕಾರ ರಾಜ್ಯದಲ್ಲಿ 13,800 ಸರ್ಕಾರಿ ಶಾಲೆಗಳನ್ನು ವಿಲಿನದ ಹೆಸರಿನಲ್ಲಿ ಮುಚ್ಚಲು ಮುಂದಾಗಿತ್ತು. ಇದರ ವಿರುದ್ಧ ರಾಜ್ಯಾದ್ಯಂತ ನಡೆದ ವಿದ್ಯಾರ್ಥಿಗಳ ಬೃಹತ್ ಹೋರಾಟದಿಂದಾಗಿ ಈ ನಿರ್ಧಾರ ಹಿಂತೆಗೆದುಕೊಳ್ಳಲಾಯಿತು. ಸರ್ಕಾರಿ ಶಾಲೆಗಳನ್ನು ಉಳಿಸುತ್ತೇವೆ ಎಂಬ ಆಶ್ವಾಸನೆಯೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಕೂಡ ಇವಾಗ ʼಹಬ್ ಅಂಡ್ ಸ್ಪೋಕ್ʼ ಎಂಬ ಹೆಸರಿನಲ್ಲಿ ಕರ್ನಾಟಕದಲ್ಲಿ 6000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಹೀಗಾಗಿ ಎಐಡಿಎಸ್ಓ ರಾಜ್ಯ ಸಮಿತಿ ಕರೆ ನೀಡಿರುವ 50 ಲಕ್ಷ ಸಹಿ ಸಂಗ್ರಹ ಹೋರಾಟವನ್ನು ಬಲಿಷ್ಠವಾಗಿ ಕಟ್ಟಬೇಕುʼ ಎಂದು ಕರೆ ನೀಡಿದರು
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ತುಳಜರಾಮ್ ಎನ್.ಕೆ, ಜಿಲ್ಲಾ ಖಜಾಂಚಿ ವೆಂಕಟೇಶ್ ದೇವದುರ್ಗ, ಜಿಲ್ಲಾ ಉಪಾಧ್ಯಕ್ಷರಾದ ಪ್ರೀತಿ ದೊಡ್ಡಮನಿ, ಗೋವಿಂದ ಹಾಗೂ ನಾಗರಾಜ್, ಯುವರಾಜ್, ಸ್ಪೂರ್ತಿ, ಅಜಯ್, ಬಾಬು, ದೇವರಾಜ್ ಹಾಗೂ ಶಿಬಿರಾರ್ಥಿಗಳಾದ ಚೆನ್ನಮ್ಮ ಸೃಷ್ಟಿ, ಬೃಂದಾ, ಅನಿತಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
