ದೇಶದ 18ನೇ ಸಾರ್ವತ್ರಿಕ ಚುನಾವಣೆಯಲ್ಲಿ ಗುಲ್ಬರ್ಗಾ(ಎಸ್‌ಸಿ) ಲೋಕಸಭಾ ಕ್ಷೇತ್ರದಿಂದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿ ಎಸ್ ಎಂ ಶರ್ಮಾ ಅವರು ಮಂಗಳವಾರ ಕಲಬುರಗಿ ಜಿಲ್ಲಾ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಕಲಬುರಗಿ ನಗರದ ರೈಲ್ವೆ ನಿಲ್ದಾಣದಿಂದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳು ಹಾಗೂ ಜನಸಾಮಾನ್ಯರು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.
“ಮೆರವಣಿಗೆಯಲ್ಲಿ ಪಕ್ಷದ ಕೆಂಪು ಧ್ವಜಗಳು ಹಾಗೂ ಭಿತ್ತಿಪತ್ರಗಳು ರಾರಾಜಿಸುತ್ತಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸೆಕ್ರೇಟರಿ ಸದಸ್ಯ ಕೆ ಸೋಮಶೇಖರ್ ಅವರು, ದೇಶವು ಸ್ವಾತಂತ್ರ್ಯಗೊಂಡು 76 ವರ್ಷಗಳು ಗತಿಸಿದರೂ ಕೂಡ ನಮ್ಮನ್ನು ಆಳಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಸಮ್ಮಿಶ್ರ ಸರ್ಕಾರಗಳು ಜನಸಾಮಾನ್ಯರ ಜೀವನವನ್ನು ಮತ್ತಷ್ಟು ಅಧೋಗತಿಗೆ ಇಳಿಸಿವೆ. ಕೋಮುವಾದಿ, ಫ್ಯಾಸಿಸ್ಟ್‌ವಾದಿ, ಬಂಡವಾಳಶಾಹಿ ವಿರುದ್ಧ ಈ ಚುನಾವಣೆಯಲ್ಲಿ ಜನಪರ ಧ್ವನಿ ಮೊಳಗಬೇಕು. ಬಂಡವಾಳಶಾಹಿಗಳ ಏಜೆಂಟರುಗಳಾದ ಈ ಪಕ್ಷಗಳನ್ನು ತಿರಸ್ಕರಿಸಿ ಜನಹೋರಾಟದ ಮೂಲಕ ಹೊರಹೊಮ್ಮಿದ ನಮ್ಮ ಪಕ್ಷದ ಅಭ್ಯರ್ಥಿಯನ್ನು ಚುನಾಯಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಭಿವೃದ್ಧಿ ವಿಚಾರದಲ್ಲಿ ಬದಲಾವಣೆಯ ಗಾಳಿ: ಗೀತಾ ಶಿವರಾಜ್‌ಕುಮಾರ್
ಅಭ್ಯರ್ಥಿ ಎಸ್ ಎಂ ಶರ್ಮ ಮಾತನಾಡಿ, “ಜನರ ಸಮಸ್ಯೆಗಳನ್ನು ಹಾಗೂ ಜನಹೋರಾಟದ ಧ್ವನಿಯನ್ನು ಸಂಸತ್ತಿನಲ್ಲಿ ಪ್ರತಿಧ್ವನಿಸಲು ನಮ್ಮನ್ನು ಆಯ್ಕೆ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ವಿ ನಾಗಮ್ಮಳ, ಆರ್ ಕೆ ವೀರಭದ್ರಪ್ಪ, ಮಹೇಶ ನಾಡಗೌಡ, ರಾಮಣ್ಣ ಎಸ್ ಐ, ವಿ ಜಿ ದೇಸಾಯಿ, ಗಣಪತರಾವ ಕೆ ಮಾನೆ, ಮಹೇಶ ಸೇರಿದಂತೆ ಬಹುತೇಕರು ಇದ್ದರು.
