ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಮಾ.10ರಂದು ನಡೆಯಬೇಕಿದ್ದ ʼಸಂವಿಧಾನ ಜಾಗೃತಿ ಜಾಥಾʼ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಮಾ.11ಕ್ಕೆ ಮುಂದೂಡಲಾಗಿದೆ ಎಂದು ಸೇಡಂ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ತಿಳಿಸಿದ್ದಾರೆ.
ಮಹಾಶಿವರಾತ್ರಿ ಅಮಾವಾಸ್ಯೆ ಇರುವುದರಿಂದ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಭಾಗಿಯಾಗುವುದಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಆಡಳಿತದ ಸೂಚನೆ ಮೆರೆಗೆ ಮಾರ್ಚ್ 11ನೇ ತಾರಿಕಿನಂದು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ವಾಡಿ ಪಟ್ಟಣದ ತಾಲೂಕ ಪಂಚಾಯತ ಸಭಾಂಗಣದಲ್ಲಿ ಜಿಲ್ಲೆಯಾದ್ಯಂತ ನಡೆದ ಸಂವಿಧಾನ ಜಾಗೃತಿ ಜಾಥಾದ ಸಮಾರೋಪ ಸಮಾರಂಭದ ವಾಡಿ ಪಟ್ಟಣದ ಎಸಿಸಿ ಸುರಕ್ಷಾ ಕ್ಯಾಂಟಿನ್ ಆವರಣದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಅವರ ಅಧ್ಯಕ್ಷತೆಯಲ್ಲಿ 10ನೇ ತಾರಿಕಿನಂದು ಆಯೋಜನೆ ಮಾಡಲಾಗಿತ್ತು.
ಆದರೆ, ಮಹಾಶಿವರಾತ್ರಿ ಅಮಾವಾಸ್ಯೆ ಇರುವುದರಿಂದ ಜಿಲ್ಲೆಯಾದ್ಯಂತ ಇರುವ ಪ್ರತಿ ತಾಲೂಕು ಮತ್ತು ಗ್ರಾಮಗಳ ಹೆಣ್ಣುಮಕ್ಕಳು ಹಬ್ಬದ ಸಂಭ್ರಮದಲ್ಲಿ ಇರುತ್ತಾರೆ. ಹಾಗಾಗಿ ಕಾರ್ಯಕ್ರಮಕ್ಕೆ ಜನರು ಸೇರಲು ಸಾಧ್ಯವಾಗದ ಕಾರಣ, ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿ ಆಗಬೇಕು ಎಂಬ ಏಕೈಕ ಉದ್ದೇಶದಿಂದ 10ನೇ ತಾರಿಕಿನಂದು ನಡೆಯಬೇಕಿದ್ದ ಕಾರ್ಯಕ್ರಮ 11ನೇ ತಾರಿಕಿನಂದು ಮುಂದೂಡಲಾಗಿದೆ ಎಂದು ತಿಳಿಸಿದರು.
ವಾಡಿ ಪಟ್ಟಣದ ಬಳಿರಾಮಚೌಕ್ ವೃತ್ತದಿಂದ ಬೆಳಿಗ್ಗೆ 10.30ಕ್ಕೆ ಡಾ. ಅಂಬೇಡ್ಕರ್ ಸ್ಥಬ್ದಚಿತ್ರ ಮೆರವಣಿಗೆಗೆ ಚಾಲನೆ ನೀಡಲಿದ್ದು, ವೇದಿಕೆ ಕಾರ್ಯಕ್ರಮ 12ಕ್ಕೆ ಪ್ರಾರಂಭವಾಗಲಿದೆ. ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಡಾ.ಅಂಬೇಡ್ಕರ್ ಎರಡು ಬಾರಿ ಪಟ್ಟಣಕ್ಕೆ ಭೇಟಿ ನೀಡಿರುವ ಸ್ಥಳದಲ್ಲಿ ಛಾಯಚಿತ್ರ ಪ್ರದರ್ಶನ, ಸಂವಿಧಾನದ ಮಹತ್ವ ಸಾರುವ ಫಲಕಗಳು ಅಳವಡಿಸಲಾಗುವುದು,
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗಿ ಆಗಲು ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಾಹನದ ವ್ಯವಸ್ಥೆ, ಚಿತ್ತಾಪುರ ಪುರಸಭೆ ಪ್ರತಿ ವಾರ್ಡ್ ಗಳಿಗೆ ಎರಡು ವಾಹನದ ವ್ಯವಸ್ಥೆ ಮಾಡಲಾಗಿದ್ದು ಸುಮಾರು 20 ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆಯಿದ್ದು ಕಾರ್ಯಕ್ರಮದ ಸ್ಥಳದಲ್ಲಿ ಸಾರ್ವಜನಿಕರಿಗಾಗಿ ಆಸನದ ವ್ಯವಸ್ಥೆ, ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ತುರ್ತು ವಾಹನದ ವ್ಯವಸ್ಥೆ ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸೈಯದ್ ಷಾಶಾವಲಿ, ಶಹಾಬಾದ್ ತಹಸೀಲ್ದಾರ್ ಮಲ್ಲಶೆಟ್ಟಿ.ಎಸ್ ಚಿದ್ರೆ, ಕಾಳಗಿ ತಹಸೀಲ್ದಾರ್ ಘಾಮಾವತಿ ರಾಠೋಡ್, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ, ಸೇಡಂ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆಯ ಡಿ.ಎಲ್. ಗಾಜರೆ, ಸತೀಶ್ ಗದಗೇನವರ್, ಅರುಣಕುಮಾರ್, ಶುಭಾಷ, ಪ್ರಶಾಂತ್ ರಾಠೋಡ ಸೇರಿದಂತೆ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.