ರಾಜ್ಯ ಸರ್ಕಾರ ನಗದು ಬದಲು ದಿನಸಿ ಕಿಟ್ ನೀಡಿರುವುದು ಸ್ವಾಗತಾರ್ಹ. ಆದರೆ ಅವೈಜ್ಞಾನಿಕವಾಗಿ ಪಡಿತರ ಕಾರ್ಡ್ ಕಡಿತ ಮಾಡಿರುವುದು ಖಂಡನೀಯ ಎಂದು ಸಿಪಿಐಎಂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಸಿಪಿಐಎಂ ಕೆ ನೀಲಾ ಹೇಳಿದರು.
ಕಲಬುರಗಿ ನಗರದಲ್ಲಿ ಭಾರತ ಕಮ್ಯೂನಿಷ್ಟ್ ಪಕ್ಷ(ಮಾರ್ಕ್ಸ್‌ವಾದಿ) ಪರವಾಗಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದು, “ಒಕ್ಕೂಟ ಸರ್ಕಾರ ಹೆಚ್ಚುವರಿ ಐದು ಕೆ.ಜಿ ಅಕ್ಕಿ ನೀಡದ ಪ್ರಯುಕ್ತ, ರಾಜ್ಯ ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ನಗದು ಬದಲಿಗೆ, ಅಡುಗೆ ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ಸೇರಿಸಿದ ದಿನಸಿ ಕಿಟ್ ನೀಡಲು ನಿರ್ಧರಿಸಿರುವುದನ್ನು ಭಾರತ ಕಮ್ಯುನಿಸ್ಟ್ ಸ್ವಾಗತಿಸುತ್ತದೆ. ಹಾಗೆಯೇ ಇದನ್ನು ಮುಂದುವರೆಸಿ ಇತರೆ ಅಗತ್ಯ ವಸ್ತುಗಳನ್ನು ಮಾರುಕಟ್ಟೆಯ ಅರ್ಧ ದರಕ್ಕೆ ಒದಗಿಸಲು ಅಗತ್ಯ ಕ್ರಮವಹಿಸುಬೇಕು” ಎಂದು ಮನವಿ ಮಾಡಿದರು.
“ರೇಷನ್ ಕಾರ್ಡ್ ರದ್ದತಿಗೆ ಕುಟುಂಬದ ಯಜಮಾನರ ಆದಾಯದ ಬದಲಿಗೆ ಕೂಡು ಕುಟುಂಬದ ಸದಸ್ಯರ ವಾರ್ಷಿಕ ಆದಾಯ ₹1.20 ಲಕ್ಷ ಮೀರಿದರೆ ಕಾರ್ಡ್ ರದ್ದುಮಾಡುವ ಚಿಂತನೆ ಅವೈಜ್ಞಾನಿಕವಾಗಿದೆ. ಕೂಡಲೇ ಅಂತಹ ಜನ ವಿರೋಧಿ ನಿಲುವನ್ನು ಕೈ ಬಿಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | 15ನೇ ಹಣಕಾಸಿನಲ್ಲಿ ಅವ್ಯವಹಾರ; ಚರಂಡಿ ಸ್ವಚ್ಛತೆ ಕಾರ್ಯದಲ್ಲಿ ಲಕ್ಷಲಕ್ಷ ಲೂಟಿ, ಆರೋಪ
“ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗದೆ ದಿನೇ ದಿನೆ ಬೆಲೆ ಗಗನಕ್ಕೇರುತ್ತಿದೆ. ಇಂತಹ ಸಂದರ್ಭದಲ್ಲಿ, ಇಂತಹ ಯೋಚನೆಗಳು, ವ್ಯಾಪಕವಾಗಿ ಬಡ ಜನತೆಯನ್ನು ಮತ್ತಷ್ಟು ಗಂಭೀರ ಅಪೌಷ್ಠಿಕತೆಯೆಡೆಗೆ ಹಾಗೂ ಹಸಿವಿನಿಂದ ಸಾವಿನ ದವಡೆಗೆ ತಳ್ಳುವ ಸನ್ನಿವೇಶ ಎದುರಾಗುತ್ತದೆ. ಬಿಪಿಎಲ್ ಮಾನದಂಡವೇ ಅವೈಜ್ಞಾನಿಕವಾಗಿದೆ. ಅದನ್ನು ಕನಿಷ್ಠ ₹2.5 ಲಕ್ಷಕ್ಕೆ ಹೆಚ್ಚಿಸಬೇಕು” ಎಂದು ಆಗ್ರಹಿಸಿದರು.
“ವಾರ್ಷಿಕ ಆದಾಯ (ಕೂಡು ಕುಟುಂಬ)ದಲ್ಲಿ ಯಾರಾದರೂ ಆದಾಯ ಹೆಚ್ಚಳದ ದುಡಿಮೆಯಲ್ಲಿ ತೊಡಗಿದ್ದರೆ, ಅಂತಹ ವ್ಯಕ್ತಿಯನ್ನು ವೈಜ್ಞಾನಿಕ ನೀತಿಯಡಿ ಹೊರಗಿಡಬಹುದೇ ಹೊರತು ಕುಟುಂಬದ ಕಾರ್ಡ್ ರದ್ದುಗೊಳಿಸುವುದು ಸೂಕ್ತ ಕ್ರಮವಲ್ಲವೆಂದು ಭಾರತ ಕಮ್ಯೂನಿಷ್ಟ್ ಪಕ್ಷ(ಸಿಪಿಐಎಂ) ವಿಶ್ಲೇಷಿಸುತ್ತದೆ” ಎಂದು ತಿಳಿಸಿದರು.
