ಮಹಾನ್ ವ್ಯಕ್ತಿಗಳ ಹಾಗೂ ಉನ್ನತ ವಿಚಾರ ಆದರ್ಶಗಳ ಬರೀ ಹೊಗಳಿಕೆ ಮಾಡದೇ, ಅವುಗಳನ್ನು ಪ್ರಶ್ನಿಸುತ್ತಾ, ನಮ್ಮ ಜೀವನದಲ್ಲಿ ಗಂಭೀರವಾಗಿ ಅನುಸರಿಸಬೇಕು ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ. ಚಲಮೇಶ್ವರ್ ಕರೆ ನೀಡಿದರು.
ಅವರು ಕಲಬುರಗಿಯ ರಂಗಮಂದಿರದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಸ್ಮರಣ ಸಮಿತಿ, ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಎಐಡಿಎಸ್‌ಓ, ಎಐಡಿಎವೈಓ ಹಾಗೂ ಎಐಎಂಎಸ್ಎಸ್ ಸಹಯೋಗದಲ್ಲಿ ಆರಂಭವಾದ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮವಾರ್ಷಿಕಕ್ಕೆ ಸಮರ್ಪಿತವಾದ ಮೂರು ದಿನಗಳ ಸಾಂಸ್ಕೃತಿಕ ಜನೋತ್ಸವಕ್ಕೆ ಚಾಲನೆ ನೀಡಿ, ಮಾತನಾಡಿದರು.
“ನಾಯಕರನ್ನು ಆರಾಧಿಸುವುದು ಜಗತ್ತಿನಾದ್ಯಂತ ರೂಢಿಯಾಗಿದೆ. ಮಹಾತ್ಮ ಗಾಂಧೀಜಿ, ಲೆನಿನ್, ಅಬ್ರಹಾಂ ಲಿಂಕನ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮತ್ತಿತರನ್ನು ಆರಾಧಿಸುತ್ತಾರೆ. ಆರಾಧನೆ ಎಂದರೆ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವುದಷ್ಟೇ ಅಲ್ಲ. ಅವರ ವಿಚಾರಗಳನ್ನು ಪ್ರಶ್ನಿಸಬೇಕು. ಸರಿ ಎನಿಸಿದರೆ ಅವುಗಳನ್ನು ಜೀವನದಲ್ಲಿ ಅನುಸರಿಸಬೇಕು” ಎಂದರು.
“ಭಾರತದ ಸ್ವಾತಂತ್ರ್ಯ ಹೋರಾಟವು 1857ರಲ್ಲಿ ಮೊದಲ ಬಾರಿಗೆ ಆರಂಭವಾಯಿತು. ಅಂದಿನಿಂದ 1947ರವರೆಗೆ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಅಪಾರ ಪ್ರಮಾಣದ ಹೋರಾಟಗಾರರು ಹುತಾತ್ಮರಾಗಿದ್ದಾರೆ. ಬಹಳ ಕಠಿಣ ಪರಿಸ್ಥಿತಿಯಲ್ಲಿ ಈ ದೇಶದ ಸ್ವಾತಂತ್ರ್ಯ ಹೋರಾಟಗಾರರು ಚಳವಳಿಗೆ ಧುಮುಕಿದ್ದರು. ಈ ಅವಧಿಯಲ್ಲಿ ಸುಮಾರು ಆರು ಬಾರಿ ಬೃಹತ್ ಸ್ವಾತಂತ್ರ್ಯ ಆಂದೋಲನಗಳು ನಡೆದಿವೆ. ಮುಖ್ಯವಾಗಿ ಈ ಅವಧಿಯಲ್ಲಿ ಭಾರಿ ಪ್ರಮಾಣದ ಬರಗಾಲ ಆವರಿಸಿತ್ತು. ಆದರೂ, ಈಸ್ಟ್ ಇಂಡಿಯಾ ಕಂಪನಿಯು ಭಾರಿ ಪ್ರಮಾಣದ ತೆರಿಗೆ ಹೇರಿದ್ದರಿಂದ ಜನರು ಸಿಡಿದೆದ್ದಿದ್ದರು” ಎಂದು ಹೇಳಿದರು.
“ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಬಡತನ ನಿರ್ಮೂಲನೆ ಎಂಬುದು ಗಗನ ಕುಸುಮವಾಗಿದ್ದು, ಇಂದಿಗೂ ದೆಹಲಿಯ ಕೊರೆಯುವ ಚಳಿಯಲ್ಲಿ ಲಕ್ಷಾಂತರ ಜನರು ಸೇತುವೆ ಕೆಳಗಡೆ ಬದುಕುವ ಸ್ಥಿತಿ ಇದೆ. ಶಾಲಾ ಹೊತ್ತಿನಲ್ಲಿ ಬಾಲಕನೊಬ್ಬ ತನ್ನ ಹೊಟ್ಟೆ ಪಾಡಿಗಾಗಿ ಬೀದಿಗಳಲ್ಲಿ ಪತ್ರಿಕೆ ಮಾರಾಟ ಮಾಡುವ ಕಾಯಕ ಮಾಡುತ್ತಿದ್ದಾನೆ” ಎಂದು ಕಳವಳ ವ್ಯಕ್ತಪಡಿಸಿದರು.
“ನಾವು ಚಿಕ್ಕವರಿದ್ದಾಗ ದೇಶದ ಶೇ. 80ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಇಂದು ಬಹುತೇಕ ಮನೆಗಳಿಗೆ ವಿದ್ಯುತ್ ಸಂಪರ್ಕವಿದೆ. ಆದರೆ, ಇಷ್ಟಾಗಿಯೂ ಬಡತನವನ್ನು ನಿರ್ಮೂಲನೆ ಮಾಡುವುದು ಸಾಧ್ಯವಾಗಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ನಡೆಸುವುದು ಅಗತ್ಯವಾಗಿದೆ” ಎಂದು ಪ್ರತಿಪಾದಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶಿವಗಂಗಾ ರುಮ್ಮಾ ಮಾತನಾಡಿ, ‘ದೇಶದಲ್ಲಿ ಆರ್ಥಿಕ ಅಸಮಾನತೆ ವ್ಯಾಪಕವಾಗಿದ್ದು, ಜನರನ್ನು ಧರ್ಮದ ಅಮಲಿನಲ್ಲಿ ಸಿಲುಕಿಸುವ, ಪರ್ಯಾಯ ಸಂವಿಧಾನವನ್ನು ಜಾರಿಗೆ ತರುವ ಪ್ರಯತ್ನಗಳು ನಡೆದಿವೆ. ಇದರೊಂದಿಗೆ ಬರಬರುತ್ತಾ ಉದ್ಯೋಗಗಳು ಕಡಿತವಾಗುತ್ತಿದ್ದು, ಮುಂದಿನ ಪೀಳಿಗೆಗೆ ಉದ್ಯೋಗ ಸಿಗುವ ಸಾಧ್ಯತೆಗಳೇ ಇಲ್ಲವಾಗುತ್ತಿವೆ” ಎಂದರು.
“ಸಾಮಾನ್ಯ ಜನರಿಗೆ ಉದ್ಯೋಗ ಸೃಷ್ಟಿಯ ಕ್ರಮಗಳನ್ನು ಕೈಗೊಳ್ಳುವ ಬದಲು ಕೇಂದ್ರ ಸರ್ಕಾರವು 2019ರಿಂದ 2023ರ ಅವಧಿಯಲ್ಲಿ ಉದ್ಯಮಿಗಳ ₹ 14.56 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆಯಲ್ಲಿಯೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದು, ರಾಜ್ಯ ಸರ್ಕಾರ ತೆರಿಗೆ ರೂಪದಲ್ಲಿ ₹ 3.96 ಲಕ್ಷ ಕೋಟಿ ಪಾವತಿಸಿದ್ದರೆ ವಾಪಸ್ ರಾಜ್ಯಕ್ಕೆ ₹ 1.70 ಲಕ್ಷ ಕೋಟಿ ಮಾತ್ರ ಹಂಚಿಕೆಯಾಗಿದೆ. ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳು ಪುನರ್ ಹಂಚಿಕೆಯಾದರೆ ಉತ್ತರ ಪ್ರದೇಶ, ಬಿಹಾರದಲ್ಲಿ ಸೀಟುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದ್ದು, ದಕ್ಷಿಣದ ರಾಜ್ಯಗಳಿಗೆ ಭಾರೀ ಅನ್ಯಾಯವಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್. ರಾಜಶೇಖರ್ ಮಾತನಾಡಿ, ‘ಇತಿಹಾಸದ ಪಠ್ಯಕ್ರಮದಲ್ಲಿ ಸಶಸ್ತ್ರ ಹೋರಾಟವನ್ನು ನಡೆಸಿದ ಹೋರಾಟಗಾರರನ್ನು ಹಿಂಸಾವಾದಿಗಳು ಎಂದು ತಪ್ಪಾಗಿ ಬಿಂಬಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಖುದಿರಾಂ ಬೋಸ್ ಅವರಂತಹ ನಾಯಕರ ಪಾತ್ರವನ್ನು ಅಲ್ಲಗಳೆಯಲಾಗದು” ಎಂದರು.
“ಗಾಂಧೀಜಿಯವರ ವಿಚಾರಗಳ ಬಗ್ಗೆ ನೇತಾಜಿಯವರಿಗೆ ಕೆಲ ಭಿನ್ನಾಭಿಪ್ರಾಯಗಳಿದ್ದವು. ಆದರೆ, ಗಾಂಧೀಜಿ ಅವರಿಗೆ ಮಹಾತ್ಮ ಎಂದು ನಾಮಕರಣ ಮಾಡಿದ್ದ ನೇತಾಜಿ ಅವರು ಗಾಂಧೀಜಿ ಬಗ್ಗೆ ಅಪಾರ ಗೌರವ ಇರಿಸಿಕೊಂಡಿದ್ದರು. ಭಗತ್ ಸಿಂಗ್ ಅವರಿಗೂ ಅಂತಹದೇ ಭಾವನೆ ಇತ್ತು. ಆದರೆ, ಭಿನ್ನಾಭಿಪ್ರಾಯ ಸಹಿಸದ ನಾಥೋರಾಮ್ ಗೋಡೆ ಗಾಂಧೀಜಿ ಅವರನ್ನು ಕೊಂದು ಹಾಕಿದ” ಎಂದು ಸ್ಮರಿಸಿದರು.
“ದೇಶವು ಇಂದು ಸಂಕಷ್ಟ ಪರಿಸ್ಥಿತಿಯಲ್ಲಿದೆ. ಅಮೂಲಾಗ್ರವಾದ ಬದಲಾವಣೆಯ ಅವಶ್ಯಕತೆಯಿದೆ. ಹಾಗಾಗಿ ಇಂದಿನ ಯುವಪೀಳಿಗೆ ನೇತಾಜಿ, ಭಗತ್ ಸಿಂಗ್, ಅಶ್ಫಾಖುಲ್ಲಾ ಖಾನ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ. ಬಲಿದಾನಗಳಿಂದ ಪ್ರೇರಿತವಾಗಿ ಸಮಸಮಾಜವನ್ನು ಉನ್ನತ ವಿಚಾರ ಸಂಸ್ಕೃತಿಯ ಮೇಲೆ ಕಟ್ಟುವ ಪ್ರತಿಜ್ಞೆ ಮಾಡಬೇಕಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ತ್ಯಾಗಮಯಿ ರಮಾಬಾಯಿಯನ್ನು ಸ್ಮರಿಸಿಕೊಳ್ಳಬೇಕು: ಡಾ. ಹಣಮಂತರಾವ್ ದೊಡ್ಡಮನಿ
ವೇದಿಕೆಯಲ್ಲಿ ಎಸ್.ಎಸ್. ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಹೇಶ್ವರಿ ಹಿರೇಮಠ, ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿಗಳಾದ ತುಳಚಾರಾಮ, ಎಐಎಮ್ಎಸ್‌ಎಸ್ ಜಿಲ್ಲಾ ಕಾರ್ಯದರ್ಶಿಗಳಾದ ಡಾ. ಸೀಮಾ ದೇಶಪಾಂಡೆ, ಎಐಡಿವೈಓ ಜಿಲ್ಲಾ ಕಾರ್ಯದರ್ಶಿಗಳಾದ ಈಶ್ವರ ಉಪಸ್ಥಿತರಿದ್ದರು. ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಆಶ್ವಿನಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಲವಾರು ನ್ಯಾಯವಾದಿಗಳು, ಉಪನ್ಯಾಸಕರು ಹಾಗೂ 500ಕ್ಕೂ ಹೆಚ್ಚು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.