ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌರ್ ಗ್ರಾಮದ ರವಿ ಸದಾಶಿವಪ್ಪ ಮತ್ತು ವಾಡಿ ಪಟ್ಟಣದ ಪ್ರಿಯಾಂಕಾ ಎಚ್.ಶಿಂಧೆ ಇವರು ಸಂವಿಧಾನ ಪೀಠಿಕೆ ಓದುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಗರದ ಶೆಟ್ಟಿ ಫಂಕ್ಷನ್ ಹಾಲ್‌ನಲ್ಲಿನಡೆದ ಮದುವೆಯ ಬಗ್ಗೆ ವರ ರವಿ ಗೌರ್ ಮಾತನಾಡಿ, ಸಮಸ್ತ ಭಾರತೀಯರಿಗೆ ಬದುಕುವ ಹಕ್ಕು ನೀಡಿದ್ದು ಭಾರತದ ಸಂವಿಧಾನ. ಸ್ವಾತಂತ್ರ್ಯವಿಲ್ಲದ ಬದುಕಿನಿಂದ ಮುಕ್ತಿ ನೀಡಿದ ಹೆಮ್ಮೆಯ ಸಂವಿಧಾನವೇ ನನ್ನ ಪ್ರತೀ ಕ್ಷಣ ಖುಷಿಯ ಬದುಕಿಗೆ ಸಾಕ್ಷಿಯಾಗಿದ್ದು. ದಾಂಪತ್ಯ ಜೀವನಕ್ಕೆ ಕಾಲಿಡುವ ಮಧುರ ಕ್ಷಣವೂ ಸಹ ಸಂವಿಧಾನದ ನೆರಳಲ್ಲಿ ನಡೆಯಬೇಕು ಎನ್ನುವುದು ನನ್ನ ಮಹದಾಸೆ ಆಗಿತ್ತು ಎಂದರು.
ಇದಕ್ಕೆ ನಮ್ಮ ಎರಡು ಕುಟುಂಬದವರು ಒಪ್ಪಿಗೆ ನೀಡಿರುವುದರಿಂದ ನಮ್ಮ ಆಸೆಯಂತೆ ಸಂವಿಧಾನ ಪೀಠಿಕೆ ಓದುವುದರ ಮೂಲಕ ದಾಂಪತ್ಯ ಜೀವನ ಪ್ರಾರಂಭೀಸಿದ್ದೇವೆ ಎಂದು ತಮ್ಮ ಖುಷಿ ಕ್ಷಣ ಎಲ್ಲರೊಂದಿಗೆ ಹಂಚಿಕೊಂಡರು.
ವಿಶೇಷ ಮದುವೆ ಸಮಾರಂಭದಲ್ಲಿ ಕುಟುಂಬದ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳು ಭಾಗಿಯಾಗುವುದರ ಜೊತೆಗೆ ಎಲ್ಲರೂ ಸಂವಿಧಾನ ಪೀಠಿಕೆ ಓದುವುದರ ಮೂಲಕ ನವಜೋಡಿಗೆ ಶುಭ ಹಾರೈಸಿವುದರ ಮೂಲಕ ಆಶೀರ್ವದಿಸಿದರು.
